ಹೈದರಾಬಾದ್: ಟೀಂ ಇಂಡಿಯಾಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ, ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಹರಿಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್ ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕನ ಜನ್ಮದಿನಕ್ಕೆ ಬಿಸಿಸಿಐ ಸೇರಿದಂತೆ ಹಲವು ಆಟಗಾರರು, ಅಭಿಮಾನಿಗಳು ಮತ್ತು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.

ಜನವರಿ 6,1959ರಂದು ಚಂಡೀಗಢದಲ್ಲಿ ಜನಿಸಿದ ಕಪಿಲ್ದೇವ್ ತಮ್ಮ 19ನೇ ವಯಸ್ಸಿನಲ್ಲಿ ಭಾರತದ 25ನೇ ಕ್ರಿಕೆಟರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧವೇ ಮೊದಲ ಏಕದಿನ ಪಂದ್ಯ ಆಡಿರೋದು ವಿಶೇಷ.
ಭಾರತ ತಂಡದ ನಾಯಕತ್ವ: 1982 - 83ರ ಪಾಕ್ ಪ್ರವಾಸ ಕೈಗೊಂಡಿದ್ದ ಗವಾಸ್ಕರ್ ನೇತೃತ್ವದ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 6 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3 ಪಂದ್ಯ ಸೋತರೆ ಮತ್ತೆ 3 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಮಾತ್ರ ಸಫಲವಾಗಿತ್ತು. ಈ ಸೋಲಿನಿಂದ ಕೆಲ ಆಟಗಾರರು ಕಪಿಲ್ ದೇವ್ರನ್ನು ನಾಯಕನನ್ನಾಗಿ ಮಾಡಲು ಒಲುವು ತೋರಿದರು. ಈ ಸರಣಿಯ ಸೋಲಿನ ಬೆನ್ನಲ್ಲೇ ಭಾರತ ಆಯ್ಕೆ ಸಮಿತಿ 24 ವರ್ಷದ ಕಪಿಲ್ ದೇವ್ರನ್ನು ನಾಯಕನನ್ನಾಗಿ ನೇಮಿಸಿ 1983ರ 3ನೇ ವಿಶ್ವಕಪ್ಗೆ ಕಳುಹಿಸಿತು.

ಭಾರತಕ್ಕೆ ಚೊಚ್ಚಲ ವಿಶ್ವಕಪ್: ಕೇವಲ 24 ವರ್ಷದ ಕಪಿಲ್ ದೇವ್ ಅನುಭವಿಗಳ ಪಡೆ ಮುನ್ನಡೆಸಿದ ರೀತಿ ನಿಜಕ್ಕೂ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಸವಿನೆನೆಪು ಎಂದರೆ ತಪ್ಪಾಗಲ್ಲ.
ವಿಶ್ವಕಪ್ನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಬಲಿಷ್ಠ ಹಾಗೂ 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ಗೆ 34 ರನ್ಗಳಿಂದ ಸೋಲುಣಿಸಿತ್ತು. 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 5 ವಿಕೆಟ್ನಿಂದ ಗೆದ್ದರೆ, 3ನೇ ಮ್ಯಾಚ್‌ನಲ್ಲಿ ಆಸೀಸ್ ವಿರುದ್ಧ 162 ರನ್, ವೆಸ್ಟ್ ಇಂಡೀಸ್ ವಿರುದ್ಧ 66 ರನ್ಗಳ ಹೀನಾಯ ಸೋಲು ಕಂಡಿತ್ತು.

ಸೆಮಿಫೈನಲ್ ಪ್ರವೇಶಿಸಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ಏಕಾಂಗಿ ಹೋರಾಟ ನಡೆಸಿ 175 ರನ್ ಗಳಿಸಿ ಭಾರತಕ್ಕೆ 31 ರನ್ಗಳಿಂದ ಜಯ ತಂದುಕೊಟ್ಟರು. ಆಸ್ಟ್ರೇಲಿಯಾವನ್ನು 118 ರನ್ಗಳಿಂದ ಮಣಿಸಿದ ಭಾರತ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 6 ವಿಕೆಟ್ಗಳಿಂದ ಬಗ್ಗು ಬಡಿದು ಫೈನಲ್‌ಗೆ ಲಗ್ಗೆಯಿಟ್ಟಿತ್ತು.
ರೋಚಕ ಫೈನಲ್, ಭಾರತಕ್ಕೆ ವಿಶ್ವಕಪ್: ಭಾರತ ತಂಡದ ಸೆಮಿಫೈನಲ್ ಪ್ರವೇಶಿಸುವುದೇ ಅತ್ಯಂತ ದೊಡ್ಡ ಸಾಧನೆ ಎನ್ನುವಂತಿದ್ದ ಕಾಲದಲ್ಲಿ ಫೈನಲ್ ಪಂದ್ಯದಲ್ಲಿ ವಿಂಡೀಸ್‌ಗೆ ಶಾಕ್ ನೀಡಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 184 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತ ಬೆನ್ನೆತ್ತಿದ ವಿಂಡೀಸ್ ಕೇವಲ 140 ರನ್ಗಳಿಗೆ ಆಲೌಟ್ ಆಗುವ ಮೂಲಕ 40 ರನ್ಗಳ ಅಚ್ಚರಿಯ ಸೋಲು ಕಂಡಿತ್ತು.
ಇಲ್ಲಿ ವಿಂಡೀಸ್ ಸೋಲನುಭವಿಸಿತು ಎನ್ನುವುದಕ್ಕೆ ಬಿಸಿರಕ್ತದ ಯುವಕನ ನಾಯಕತ್ವ ಅಲ್ಲಿ ಕೆಲಸ ಮಾಡಿತ್ತು. ಕೆಚ್ಚೆದೆಯ ಹೋರಾಟ, ಅಗ್ರೇಸಿವ್ ನಾಯಕತ್ವ, ತಂಡದ ಮೇಲಿನ ವಿಶ್ವಾಸ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿತ್ತು.

ವಿಶ್ವಶ್ರೇಷ್ಠ ಆಲ್ರೌಂಡರ್: ಕಪಿಲ್ ದೇವ್ ಭಾರತ ತಂಡವನ್ನು ಬೆಳೆಸಿದ್ದು ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಒಬ್ಬ ಅದ್ಭುತ ಆಲ್ರೌಂಡರ್ ಆಗಿದ್ದರು. ಇವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದರು. ಹಾಗಾಗಿ ಅವರು ವಿಶ್ವ ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಇನ್ನೂ ಮೊದಲ ಸ್ಥಾನದಲ್ಲೇ ಇದ್ದಾರೆ.
ಕಪಿಲ್ ದೇವ್ ಭಾರತದ ಪರ 131 ಟೆಸ್ಟ್ ಪಂದ್ಯಗಳನ್ನಾಡಿದ್ದು, 5,248 ರನ್ ಹಾಗೂ 434 ವಿಕೆಟ್, 225 ಏಕದಿನ ಪಂದ್ಯಗಳಿಂದ 3,783 ರನ್ ಹಾಗೂ 253 ವಿಕೆಟ್ ಪಡೆದಿದ್ದರು. 1994 ರಿಂದ 2000ರವರೆಗೂ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಕಪಿಲ್ ದೇವ್ ಹೆಸರಿಲ್ಲೇ ಇತ್ತು. ವೆಸ್ಟ್ ಇಂಡೀಸ್‌ನ ಕರ್ಟ್ಲಿ ವಾಲ್ಷ್ 2000ರಲ್ಲಿ ಈ ದಾಖಲೆ ಮುರಿದಿದ್ದರು.
ಪ್ರಶಸ್ತಿಗಳು:
1979-80 –ಅರ್ಜುನ ಪ್ರಶಸ್ತಿ
1982- ಪದ್ಮಶ್ರೀ ಪ್ರಶಸ್ತಿ
1983 - ವರ್ಷದ ವಿಸ್ಡನ್ ಕ್ರಿಕೆಟರ್
1991- ಪದ್ಮಭೂಷಣ ಪ್ರಶಸ್ತಿ
2002- ವಿಸ್ಡನ್ ವರ್ಷದ ಭಾರತದ ಕ್ರಿಕೆಟಿಗ
2010- ಐಸಿಸಿ ಕ್ರಿಕೆಟ್ನಿಂದ ಹಾಲ್ ಆಫ್ ಫೇಮ್ ಗೌರವ
2013- ಗ್ರೇಟೆಸ್ಟ್ ಗ್ಲೋಬಲ್ ಲಿವಿಂಗ್ ಲೆಜೆಂಡ್ಸ್ ಇನ್ ಇಂಡಿಯಾ
2013- ಸಿ ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ