ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ನಾಲ್ಕನೇ ಟಿ-20 ಪಂದ್ಯ ವೆಲ್ಲಿಂಗ್ಟನ್ನಲ್ಲಿ ನಡೆಯಲಿದ್ದು ಈಗಾಗಲೆ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡುವ ಯೋಜನೆ ಹಾಕಿಕೊಂಡಿದೆ.
ಐದು ಟಿ-20 ಸರಣಿಯಲ್ಲಿ 3-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆ ಮುಂದಿನ ಪಂದ್ಯಗಳನ್ನೂ ಗೆದ್ದು, ಸರಣಿ ವೈಟ್ವಾಶ್ ಮಾಡುವ ಹುಮ್ಮಸ್ಸಿನಲ್ಲಿದೆ. ಕಿವೀಸ್ ವಿರುದ್ಧ ಆಲ್ರೌಂಡ್ ಪ್ರದರ್ಶನ ನೀಡಿರುವ ಭಾರತ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸುವ ಯೋಜನೆಯಲ್ಲಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದೆ. ಮೊದಲ ಎರಡು ಟಿ-20 ಪಂದ್ಯಗಳಲ್ಲಿ ವಿಫಲವಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೂರನೇ ಟಿ-20 ಪಂದ್ಯದಲ್ಲಿ ಲಯಕ್ಕೆ ಮರಳಿದ್ದಾರೆ. ಇದು ಕೊಹ್ಲಿ ಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತ ವಿರಾಟ್, ರಾಹುಲ್, ಅಯ್ಯರ್, ಮನೀಷ್ ಪಾಂಡೆ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಪಾಂಡೆ ಬದಲು ಪಂತ್-ಸಾಮ್ಸನ್ ಆಡುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಕೊಹ್ಲಿ ಹುಡುಗರು ಶೈನ್ ಆಗುತ್ತಿದ್ದಾರೆ. ಮೂರನೇ ಪಂದ್ಯದ ಅಂತಿಮ ಓವರ್ನಲ್ಲಿ ಶಮಿ 9 ರನ್ ಬಿಟ್ಟುಕೊಡದೆ ಕಿವೀಸ್ ಪಡೆಯನ್ನ ಕಟ್ಟಿಹಾಕಿದ್ದು ಭಾರತದ ಬೌಲಿಂಗ್ ಶಕ್ತಿಯನ್ನ ತೋರಿಸಿ ಕೊಟ್ಟಿದ್ದಾರೆ. ಬುಮ್ರಾ, ಶಾರ್ದೂಲ್ ಠಾಕೂರ್, ಜಡೇಜಾ, ಚಹಾಲ್ ಕೂಡ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.
ಈಗಾಗಲೆ ಸರಣಿ ಗೆದ್ದಿರುವ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ 11ರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಟೀಂ ಇಂಡಿಯಾದ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಚಾನ್ಸ್ ನೀಡಿ ಅವರ ಸಾಮರ್ಥ್ಯ ಪರೀಕ್ಷೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇತ್ತ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಕಿವೀಸ್ ಪಡೆ, ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದು, ಸೋಲಿನ ಅಂತರವನ್ನ ಕಡಿಮೆ ಮಾಡಿಕೊಳ್ಳುವ ಆಲೋಚನೆ ಹೊಂದಿದೆ.