ಕೋಲ್ಕತ್ತಾ : ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಬಯೋ ಸೆಕ್ಯೂರ್ ವಲಯದಲ್ಲಿ ಏಕದಿನ ಸರಣಿಯನ್ನಾಡುತ್ತಿವೆ. ಸೆಪ್ಟೆಂಬರ್ 16ರಂದು ಈ ಸರಣಿ ಮುಗಿಯಲಿದೆ. ಆದರೆ, ಈ ಎರಡು ತಂಡದ ಆಟಗಾರರು ಆರಂಭದ ಪಂದ್ಯಗಳಲ್ಲಿ ಆಡುವ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಿಇಒ ಸತೀಶ್ ಮೆನನ್ ಹೇಳಿದ್ದಾರೆ.
ಬಯೋ ಸೆಕ್ಯೂರ್ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಯುಎಇ ಬಯೋ ಸೆಕ್ಯೂರ್ ವಲಯಕ್ಕೆ ವರ್ಗಾವಣೆಯಾಗುವುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಅಂತಾ ಮೆನನ್ ತಿಳಿಸಿದ್ದಾರೆ. ಕಳೆದ ವಾರ ಕೆಕೆಆರ್ ಸಿಇಒ ವೆಂಕಿ ಮೈಸೂರು, ಆ ಎರಡು ದೇಶಗಳ ಆಟಗಾರರು ಆರಂಭಿಕ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದಿದ್ದರು. ಜೊತೆಗೆ ಬಯೋ ಸೆಕ್ಯೂರ್ ಬಬಲ್ನಲ್ಲಿ ಆಡುತ್ತಿರುವ ಆಟಗಾರರಿಗೆ ಮತ್ತೊಂದು ಬಯೋ ಸೆಕ್ಯೂರ್ ವಲಯಕ್ಕೆ ಪ್ರಯಾಣ ಬೆಳೆಸಲು ಕ್ವಾಂರಂಟೈನ್ ಅವಶ್ಯಕತೆಯಿಲ್ಲ ಎಂದು ಅವರು ತಿಳಿಸಿದ್ದರು.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆನನ್, ನಮಗೆ ಈವರೆಗೆ ಅದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅವರು ಬಯೋಬಬಲ್ನಿಂದ ಆಗಮಿಸುವುದರಿಂದ ಬಿಸಿಸಿಐ ಬಹುಶಃ ಕ್ವಾರಂಟೈನ್ ಕಡಿತಗೊಳಿಸಬಹುದೇನೋ.. ಆದರೆ, ನಮಗೆ ಇದರ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ ಎಂದಿದ್ದಾರೆ. ಕೆ ಎಲ್ ರಾಹುಲ್ ನಾಯಕನಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್, ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ಜೋರ್ಡಾನ್ ಪ್ರಸ್ತುತ ಇಂಗ್ಲೆಂಡ್ನಲ್ಲಿನ ಏಕದಿನ ಸರಣಿ ಆಡುತ್ತಿದ್ದಾರೆ. ಪಂಜಾಬ್ ತಂಡ ಸೆಪ್ಟೆಂಬರ್ 20ರಂದು ಡೆಲ್ಲಿ ಕ್ಯಾಪಿಟಲ್ ತಂಡವನ್ನು ಎದುರಿಸಲಿದೆ.