ಆಕ್ಲೆಂಡ್ (ನ್ಯೂಜಿಲ್ಯಾಂಡ್) : ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿದ್ದು, ಸರಣಿ ಗೆಲ್ಲುವ ಆಸೆ ಜೀವಂತವಾಗಿ ಇರಿಸಿಕೊಳ್ಳಲು ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ತಂಡ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ಇತ್ತ ಟಿ-20 ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಕಿವಿಸ್ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಇಂದೂ ಕೂಡ ತಮ್ಮ ಗೆಲುವಿನ ಅಭಿಯಾನ ಮುಂದುವರೆಸುವ ಹುಮ್ಮಸ್ಸಿನಲ್ಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ನಾಯಕ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ, ಮತ್ತು ಮಯಾಂಕ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗಿದ್ದರು.
ಇನ್ನು ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಕೊಂಚ ಸುಧಾರಿಸಬೇಕಿದೆ. ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬೌಲರ್ಗಳು ಮೊದಲ ಏಕದಿನ ಪಂದ್ಯದಲ್ಲಿ ಕೊಂಚ ಮಂಕಾಗಿದ್ದರು. ಕ್ಷೇತ್ರ ರಕ್ಷಣೆಯಲ್ಲೂ ಕೆಲವು ತಪ್ಪುಗಳನ್ನ ಎಸಗಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ಫೀಲ್ಡಿಂಗ್ ಕೋಚ್ ರಾಮಕೃಷ್ಣನ್ ಶ್ರೀಧರ್ ಮುಂದಿನ ಪಂದ್ಯದಲ್ಲಿ ಇಂತಾ ತಪ್ಪುಗಳಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದರು.

ಇತ್ತ ಟಿ-20 ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಕಿವಿಸ್ ಆಟಗಾರರು ಮೊದಲ ಏಕದಿನ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದಾರೆ. ಹೆನ್ರಿ ನಿಕೋಲಸ್, ಥಾಮ್ ಲಾಥಮ್, ರಾಸ್ ಟೇಲರ್ ಉತ್ತಮ ಫರ್ಮ್ನಲ್ಲಿದ್ದು, ಕಿವಿಸ್ ಶಕ್ತಿ ಹೆಚ್ಚಿಸಿದೆ. ಬೌಲಿಂಗ್ ವಿಭಾಗದಲ್ಲಿ ಕಿವಿಸ್ ಕೂಡ ಕೊಂಚ ಸುಧಾರಿಸುವ ಅವಶ್ಯಕತೆ ಇದೆ.
ಸಂಭಾವ್ಯ ತಂಡ:
ಟೀಂ ಇಂಡಿಯಾ: ಪೃಥ್ವಿ ಶಾ, ಮಯಾಂಕ್ ಅಗರವಾಲ್, ವಿರಾಟ್ ಕೊಹ್ಲಿ(ಕ್ಯಾಪ್ಟನ್), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್(ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ.
ನ್ಯೂಜಿಲ್ಯಾಂಡ್ : ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೂಲಸ್, ಥಾಮ್ ಲಾಥಮ್(ಕ್ಯಾಪ್ಟನ್), ಥಾಮ್ ಬ್ಲಂಡೆಲ್, ರಾಸ್ ಟೇಲರ್, ಜೇಮ್ಸ್ ನಿಸ್ಸಮ್, ಗ್ರ್ಯಾಂಡ್ಹೊಮ್, ಸ್ಯಾಟ್ನರ್,ಥೀಮ್ ಸೌಥಿ, ಇಶಾ ಸೋಧಿ, ಹಿಮಿಶ್ ಬೆನಿಟ್.