ನವದೆಹಲಿ: ತಾವು ಎಲ್ಲಿದ್ದೇವೆ ಎಂದು ಸಮರ್ಪಕ ಮಾಹಿತಿ ನೀಡದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಚೇತೇಶ್ವರ ಪೂಜಾರ, ಕೆ.ಎಲ್.ರಾಹುಲ್, ಮತ್ತು ರವೀಂದ್ರ ಜಡೇಜ ಸೇರಿದಂತೆ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಐವರು ಕ್ರಿಕೆಟಿಗರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ದಿಂದ ಶನಿವಾರ ನೋಟಿಸ್ ಜಾರಿಯಾಗಿದೆ.
ಮಹಿಳಾ ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರಿಗೂ ನೋಟಿಸ್ ನೀಡಲಾಗಿದೆ. ಆದರೆ ಈ ಬಗ್ಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಸ್‌ವರ್ಡ್ ಸಮಸ್ಯೆಯಿಂದಾಗಿ ವಿವರ ಸಲ್ಲಿಸಲು ಆಗಿಲ್ಲ ಎಂದು ಆಟಗಾರರನ್ನು ಸಮರ್ಥಿಸಿಕೊಂಡಿದೆ.
ನೋಟಿಸ್ ಜಾರಿ ಬಗ್ಗೆ ಮಾತನಾಡಿರುವ ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್, ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದ ಆಡಳಿತ ಮತ್ತು ವ್ಯವಸ್ಥಾಪನಾ ಸೌಲಭ್ಯ ಸಾಫ್ಟ್‌ವೇರ್‌ನಲ್ಲಿ (ಆ್ಯಡಮ್ಸ್) ಕ್ರೀಡಾಪಟುಗಳು ಎರಡು ಬಗೆಯಲ್ಲಿ ಮಾಹಿತಿ ನೀಡಬಹುದಾಗಿದೆ. ಇದನ್ನು ಸ್ವತಃ ಆಟಗಾರರು ಅಥವಾ ಅವರು ಪ್ರತಿನಿಧಿಸುವ ಸಂಸ್ಥೆಯೂ ಕೂಡ ಮಾಹಿತಿ ಅಪ್‌ಲೋಡ್ ಮಾಡಬಹುದಾಗಿದೆ. ಕೆಲವು ಕ್ರೀಡಾಪಟುಗಳಿಗೆ ಈ ಕುರಿತು ಸಮರ್ಪಕ ಮಾಹಿತಿ ಇಲ್ಲ. ಅಲ್ಲದೆ ಇಂಟರ್‌ನೆಟ್ ಸಮಸ್ಯೆ ಇರುವುದರಿಂದಲೂ ಕೆಲವರಿಗೆ ಮಾಹಿತಿ ತುಂಬಲು ಆಗುತ್ತಿಲ್ಲ. ಇಂತಹ ಸಂದರ್ಭಗಳಿದ್ದರೆ ಸಂಬಂಧಪಟ್ಟ ಸಂಸ್ಥೆಯಿಂದ ನೆರವು ಪಡೆಯಬೇಕು ಎಂದು ತಿಳಿಸಿದ್ದಾರೆ.
ಆದರೆ ಕ್ರಿಕೆಟ್ ಆಟಗಾರರೆಲ್ಲರೂ ತಂತ್ರಜ್ಞಾನ ಬಳಕೆ ಬಗ್ಗೆ ತಿಳಿದವರಾಗಿದ್ದಾರೆ. ಆದರೂ ಮಾಹಿತಿ ನೀಡಿಲ್ಲ, ಏನೇ ಆಗಿದ್ದರೂ ಅದಕ್ಕೆ ಅವರು ಪ್ರತಿನಿಧಿಸುವ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಆಟಗಾರರ ಮಾಹಿತಿ ನೀಡುವುದಾಗಿ ಬಿಸಿಸಿಐ ಈ ಹಿಂದೆಯೇ ಒಪ್ಪಿಗೆ ನೀಡಿತ್ತು. ಅದರಂತೆ ಮಾಹಿತಿ ಅಪ್‌ಲೋಡ್ ಮಾಡಬೇಕಾಗಿದೆ ಎಂದರು.
ಮಾಹಿತಿ ಅಪ್‌ಲೋಡ್ ಆಗದಿರುವ ಬಗ್ಗೆ ಬಿಸಿಸಿಐ ಕಾರಣವನ್ನು ತಿಳಿಸಿದ್ದು, ಸದ್ಯ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸಾಫ್ಟ್‌ವೇರ್‌ನ ಪಾಸ್‌ವರ್ಡ್ ಸಮಸ್ಯೆಯಿಂದ ಹೀಗಾಗಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಆದರೆ ತಾಂತ್ರಿಕ ಅಂಶಗಳನ್ನು ಪರಿಶೀಲನೆ ಮಾಡಿದ ಬಳಿಕವೇ ಈ ಬಗೆಗಿನ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ನವೀನ್ ಮಾಹಿತಿ ನೀಡಿದ್ದಾರೆ.
ಇನ್ನೂ ಸತತ ಮೂರು ಬಾರಿ ಮಾಹಿತಿ ನೀಡುವಲ್ಲಿ ವಿಫಲವಾದರೆ ಉದ್ದೀಪನ ಮದ್ದು ತಡೆ ಉಲ್ಲಂಘನೆ ನಿಯಮದ ಆಧಾರದ ಮೇಲೆ (ಎಡಿಆರ್‌ವಿ) ಮೊದಲ ತಪ್ಪು ಎಂದು ನಾಡಾ ಪರಿಗಣಿಸುತ್ತದೆ. ಅಲ್ಲದೆ ತಪ್ಪು ಸಾಬೀತಾದರೆ ವಿಚಾರಣೆಗಾಗಿ ಎರಡು ವರ್ಷ ಅಮಾನತು ಮಾಡುವ ಸಾಧ್ಯತೆ ಕೂಡ ಇರುತ್ತದೆ.