ಸಿಡ್ನಿ: ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವುದು ಆಸ್ಟ್ರೇಲಿಯಾ ವಿರುದ್ಧದ ದೊಡ್ಡ ಸರಣಿಯಗೆ ಯಾವುದೇ ಒತ್ತಡವಿಲ್ಲದೆ ತಯಾರಿ ನಡೆಸಲು ನನಗೆ ಅವಕಾಶ ಮಾಡಿಕೊಟ್ಟಿದೆ ಎಂದು ಭಾರತದ ವೇಗಿ ಮೊಹಮ್ಮದ್ ಶಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಮಿ ಈ ವರ್ಷದ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ 14 ಪಂದ್ಯಗಳಿಂದ 20 ವಿಕೆಟ್ ಪಡೆದು ಮಿಂಚಿದ್ದರು. ಅದರಲ್ಲೂ ಮುಂಬೈನಂತಹ ಬಲಿಷ್ಠ ತಂಡದ ಎದುರು ಸೂಪರ್ ಓವರ್ನಲ್ಲಿ ಕೇವಲ 5 ರನ್ ಕೊಟ್ಟು ಡಿಫೆನ್ಸ್ ಮಾಡಿಕೊಂಡಿದ್ದು ರೋಚಕವಾಗಿತ್ತು.
"ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್ನಲ್ಲಿ ನೀಡಿದ ಪ್ರದರ್ಶನ ನನಗೆ ಸಾಕಷ್ಟು ಆತ್ಮವಿಶ್ವಾಸ ಮತ್ತು ಸರಿಯಾದ ಮಾರ್ಗದಲ್ಲಿ ಇರಿಸಿದೆ. ಇದು ಆಸ್ಟ್ರೇಲಿಯಾ ವಿರುದ್ಧದ ದೊಡ್ಡ ಸರಣಿಯಲ್ಲಿ ತಯಾರಿ ನಡೆಸಲು ನನಗೆ ಸಿಕ್ಕಿರುವ ಬಹುದೊಡ್ಡ ಅವಕಾಶ. ಮುಂಬರುವ ಸರಣಿಗಳಲ್ಲಿ ಯಾವುದೇ ಒತ್ತಡವಿಲ್ಲದೆ ಆಡಲಿದ್ದೇನೆ. ನಾನು ಈ ಸಮಯದಲ್ಲಿ ತುಂಬಾ ಆರಾಮಾದಾಯಕವಾಗಿದ್ದೇನೆ" ಎಂದಿದ್ದಾರೆ.
ಬೌಲಿಂಗ್ ಮತ್ತು ಫಿಟ್‌ನೆಸ್‌ಗಾಗಿ ಲಾಕ್‌ಡೌನ್‌ನಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಐಪಿಎಲ್ ಯಾವಾಗಲಾದರೂ ನಡೆದೇ ನಡೆಯುತ್ತದೆ ಎಂದು ನನಗೆ ತಿಳಿದಿತ್ತು. ಅದಕ್ಕೆ ನಾನು ತಯಾರಿ ನಡೆಸಿದ್ದೆ ಎಂದು ಅವರು ತಿಳಿಸಿದ್ದಾರೆ.
2018ರ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಪಡೆದಿದ್ದರೆ, ಶಮಿ 16 ವಿಕೆಟ್ ಪಡೆದು ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.