ಕೋಲ್ಕತ್ತಾ: ಭಾರತ ತಂಡವನ್ನು ಪ್ರತಿನಿಧಿಸಿರುವ ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್ ಅವರಂತಹ ಬಲಿಷ್ಠ ಆಟಗಾರರಿದ್ದ ಕರ್ನಾಟಕ ತಂಡವನ್ನು ಸೋಲಿಸಲು ಪಶ್ಚಿಮ ಬಂಗಾಳಕ್ಕೆ ನೆರವಾಗಿದ್ದು ಬಿಹಾರದಿಂದ ವಲಸೆ ಬಂದ ಒಬ್ಬ ಟ್ಯಾಕ್ಸಿ ಡ್ರೈವರ್ ಮಗ.
ಹೌದು, ಕರ್ನಾಟಕದಂತಹ ಬಲಿಷ್ಠ ತಂಡವನ್ನು ಮಣಿಸುವುದು ಪಶ್ಚಿಮ ಬಂಗಾಳಕ್ಕೆ ಆಗದ ಕೆಲಸ ಎಂದು ಸೆಮಿಫೈನಲ್ಗೂ ಮುನ್ನ ಭಾವಿಸಲಾಗಿತ್ತು. ಯಾಕೆಂದರೆ ತಂಡದಲ್ಲಿ ಕೆ.ಎಲ್.ರಾಹುಲ್, ಮನೀಷ್ ಪಾಂಡೆಯಂತಹ ಘಟಾನುಘಟಿಗಳಿದ್ದರು. ಆದರೆ ಮುಖೇಶ್ ತಂಡದ ಸಹ ಬೌಲರ್ ಆಕಾಶ್ ದೀಪ್ ಜೊತೆ ಸೇರಿ ಕರ್ನಾಟಕ ತಂಡವನ್ನು 171 ರನ್ಗಳ ಅಂತರದಿಂದ ಮಣಿಸಿ 13 ವರ್ಷಗಳ ನಂತರ ಪಶ್ಚಿಮ ಬಂಗಾಳವನ್ನು ಫೈನಲ್ಗೇರುವಂತೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದಿದ್ದ ಮುಖೇಶ್, ಎರಡನೇ ಇನ್ನಿಂಗ್ಸ್ನಲ್ಲಿ 61 ರನ್ ನೀಡಿ 6 ವಿಕೆಟ್ ಪಡೆದು ಕರ್ನಾಟಕವನ್ನು ಮಣಿಸಲು ನೆರವಾದರು.
ಆದರೆ 6 ವರ್ಷದ ಕೆಳಗೆ ಪಾಕಿಸ್ತಾನದ ಲೆಜೆಂಡ್ ವಾಕರ್ ಯೂನಿಸ್ ನೇತೃತ್ವದಲ್ಲಿ ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ಯೋಜನೆ 'ವಿಷನ್ 2020' ಟ್ರಯಲ್ಸ್ ನಡೆಸಿತ್ತು. ಆ ಸಂದರ್ಭದಲ್ಲಿ ವಾಕರ್ ಯೂನಿಸ್, ಮುಖೇಶ್ರನ್ನು ವೇಸ್ಟ್, ಈತನಲ್ಲಿ ತಂಡಕ್ಕೆ ಅಗತ್ಯವಾದ ಒಂದು ಕೌಶಲ್ಯವೂ ಇಲ್ಲ ಎಂದು ರಿಜೆಕ್ಟ್ ಮಾಡಿದ್ದರಂತೆ. ಆದರೆ ಅದೇ ಮುಖೇಶ್ ಕುಮಾರ್ ಕರ್ನಾಟಕ ತಂಡದ ಫೈನಲ್ ಕನಸನ್ನು ಭಗ್ನ ಮಾಡಿದ್ದಾರೆ. ಜೊತೆಗೆ ವಾಕರ್ ಯೂನಿಸ್ ಅಭಿಪ್ರಾಯವನ್ನು ಸುಳ್ಳು ಮಾಡಿ, ಬಂಗಾಳದ ಬೌಲಿಂಗ್ ಕೋಚ್ ರಣದೇಬ್ ಬೋಸ್ ಹಾಗೂ ಸೌರವ್ ಗಂಗೂಲಿ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶೂ ಇಲ್ಲ, ಅಂದು ಆಡುತ್ತಿದ್ದದ್ದು ಟೆನ್ನಿಸ್ ಬಾಲ್ ಕ್ರಿಕೆಟ್!
ಟ್ರಯಲ್ಗಾಗಿ ಬಂದಿದ್ದ ಮುಖೇಶ್ ಆ ಸಂದರ್ಭದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದವರು. ವಾಕರ್ ಆತನನ್ನು ವಿಷನ್ 2020 ಸ್ಕ್ವಾಡ್ನಿಂದ ತಿರಸ್ಕರಿಸಿದ್ದರು. ಆದರೆ ನನಗೆ ಆತ ಇಷ್ಟವಾಗಿದ್ದ. ನಾನು ವಾಕರ್ರನ್ನು ಕೋರಿಕೊಂಡು ಮುಖೇಶ್ರನ್ನು ಆಯ್ಕೆ ಮಾಡಿಸಿದ್ದೆ. ಆದರೆ ಆತನ ಬಳಿ ಅಂದು ಒಂದು ಶೂ ಇರಲಿಲ್ಲ. ನಾನೇ ಸ್ಪೈಕ್ ಶೂ ಕೊಡಿಸಿದ್ದೆ ಎಂದು ರಣದೇಬ್ ಬೋಸ್, ಮುಖೇಶ್ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮುಖೇಶ್ ತಂದೆ ಟ್ಯಾಕ್ಸಿ ಡ್ರೈವರ್ ಆಗಿದ್ದರಿಂದ ಕ್ರಿಕೆಟ್ ತರಬೇತಿ ಪಡೆಯಲು ಆತನ ಬಳಿ ಹಣವಿರಲಿಲ್ಲ. ಸಿಎಬಿ ಅಧ್ಯಕ್ಷರಾಗಿದ್ದ ಗಂಗೂಲಿ ಮನವೊಲಿಸಿ ಸಿಎಬಿಯಿಂದಲೇ ವಸತಿ ಸೌಲಭ್ಯ ಹಾಗೂ ತರಬೇತಿ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಇದೇ ರಣದೇಬ್ ಬೋಸ್ ಸಹಾಯ ಮಾಡಿದ್ದರಂತೆ.
ರಣಜಿ ಆಯ್ಕೆ
ಮುಖೇಶ್ರನ್ನು 2015ರಲ್ಲಿ ರಣಜಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಗಂಗೂಲಿ ಫರ್ಸ್ಟ್ ಡಿವಿಜನ್ ತಂಡದಲ್ಲಿ ಆಡದ ಮುಖೇಶ್ರನ್ನು ರಣಜಿ ತಂಡಕ್ಕೆ ಆಯ್ಕೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದರು. ಏಕೆಂದರೆ ಆತನನ್ನು ಆಯ್ಕೆ ಮಾಡಿದ್ದು ಸೆಹ್ವಾಗ್ ನೇತೃತ್ವದ ಹರಿಯಾಣ ತಂಡದ ವಿರುದ್ಧ. ಆದರೆ ಅದೇ ಪಂದ್ಯದಲ್ಲಿ ಸೆಹ್ವಾಗ್ ವಿಕೆಟ್ ಪಡೆಯುವ ಮೂಲಕ ಮುಖೇಶ್ ತನ್ನ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದ ಎಂದು ಬೋಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಲೆದರ್ ಬಾಲ್ ಹಿಡಿದ ಒಂದೇ ವರ್ಷದಲ್ಲಿ ರಣಜಿ ಕ್ರಿಕೆಟ್ ಆಡಿದ ಆ ಯುವಕ ಇಂದು ಬಂಗಾಳ ತಂಡವನ್ನು 13 ವರ್ಷಗಳ ಬಳಿಕ ರಣಜಿ ಫೈನಲ್ಗೆ ಕರೆ ತರುವಲ್ಲಿ ಯಶಸ್ವಿಯಾಗಿರುವುದಕ್ಕೆ ರಣದೇಬ್ ಬೋಸ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಆದಷ್ಟು ಬೇಗ ಭಾರತ ಎ ತಂಡಕ್ಕೆ ಆಡಬೇಕು. ಆತನ ಫಿಟ್ನೆಸ್ ಭಾರತ ಎ ತಂಡದಲ್ಲಿರುವ ಯಾವುದೇ ಆಟಗಾರನಿಗಿಂತ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಖೇಶ್ 21 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 78 ವಿಕೆಟ್ ಪಡೆದಿದ್ದಾರೆ. 2020ರ ರಣಜಿಯಲ್ಲಿ 30 ವಿಕೆಟ್ ಪಡೆದು ಮಿಂಚಿದ್ದಾರೆ.