ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅದ್ದೂರಿ ಪ್ರದರ್ಶನ ತೋರಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿರುವ ದೀಪಕ್ ಚಹಾರ್ ಯಶಸ್ಸಿನ ಹಿಂದೆ ಸಿಎಸ್ಕೆ ನಾಯಕ ಧೋನಿ ಪಾತ್ರ ಮಹತ್ವದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಆದರೆ ಪವರ್ ಪ್ಲೇನಲ್ಲಿ ಎದುರಾಳಿಗಳನ್ನ ತನ್ನ ಬೌಲಿಂಗ್ ದಾಳಿಯಿಂದ ಬೆಚ್ಚಿ ಬೀಳಿಸುವ ದೀಪಕ್ರನ್ನು ಐಪಿಎಲ್ನ ಅತ್ಯುತ್ತಮ ವೇಗಿಯಾಗಿ ಬದಲಾಯಿಸಿದ ಧೋನಿ ಇದುವರೆಗೂ ಅವರಿಗೆ ಡೆತ್ ಓವರ್ಗಳಲ್ಲಿ ಅವಕಾಶ ನೀಡಿಲ್ಲ. ಇದರ ಬಗ್ಗೆ ಒಮ್ಮೆ ಧೋನಿಯನ್ನೇ ಕೇಳಿದ್ದಕ್ಕೆ ಅವರು ಎರಡು ಪದಗಳಲ್ಲಿ ಉತ್ತರಿಸಿ ಮಾತುಕತೆಯನ್ನು ನಿಲ್ಲಿಸಿದ್ದರು ಎಂದು ಸ್ವತಃ ಚಹಾರ್ ಹೇಳಿದ್ದಾರೆ.
ನಾನು ರೈಸಿಂಗ್ ಪುಣೆ ಸೂಪರ್ಜೇಂಟ್ಸ್ ಮತ್ತು ಪ್ರಸ್ತುತ ಸಿಎಸ್ಕೆ ತಂಡಲ್ಲೂ ನಾನು 140 ಕೆಪಿಎಚ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಆದರೂ ಧೋನಿ ಇದುವರೆಗೂ ನನಗೆ ಡೆತ್ ಓವರ್ಗಳಲ್ಲಿ ಬೌಲಿಂಗ್ ಕೊಟ್ಟಿಲ್ಲ ಎಂದು ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚಹಾರ್ ಕಳೆದ ವರ್ಷ ಅದ್ಭುತವಾಗಿ ಸಿಎಸ್ಕೆ ಫೈನಲ್ಗೇರಲು ನೆರವಾಗಿದ್ದರು. ಸಿಎಸ್ಕೆ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಆದರೆ ಧೋನಿ ಅವರ 4 ಓವರ್ಗಳ ಕೋಟವನ್ನು ಮೊದಲಾರ್ಧದಲ್ಲಿ ಮುಗಿಸುತ್ತಿದ್ದಾರೆ. ಹೆಚ್ಚುವರಿ ವೇಗವನ್ನು ಹೊಂದಿದ್ದರೂ ಸಹಾ ಧೋನಿ ತಮ್ಮನ್ನು ಏಕೆ ಆರಂಭಿಕ ಓವರ್ಗಳ ತಜ್ಞನಾಗಿ ಬಳಸುತ್ತಾರೆ ಎಂಬುದು ಆಗಾಗ್ಗೆ ಆಶ್ಚರ್ಯ ತರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದರ ಬಗ್ಗೆ ಒಂದೆರಡು ಬಾರಿ ನಾನು ಕೋಚ್ ಬಳಿ ಹೇಳಿದ್ದೆ. ಅವರೂ ಕೂಡ ನೀವು ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಬಹುದು ಎಂದು ಹೇಳಿದರು. ಕೊನೆಗೆ ಧೈರ್ಯ ಮಾಡಿ ಮಾಹಿ ಭಾಯ್ರನ್ನೇ ಕೇಳಿದೆ. ಅದಕ್ಕೆ ಅವರು "ನಾನು ಆಟಗಾರರನ್ನು ಬೆಳೆಸುತ್ತೇನೆ" ಎಂದು ಎರಡೇ ಪದಗಳಲ್ಲಿ ಮಾತುಕತೆಯನ್ನು ಮುಗಿಸಿದರು. ನಾನು ಬೇರೆ ಏನೂ ಮಾತನಾಡಲಿಲ್ಲ ಎಂದು ಚಹಾರ್ ಹೇಳಿದ್ದಾರೆ.
ಧೋನಿ 15 ವರ್ಷಗಳ ವೃತ್ತಿ ಜೀವನದಲ್ಲಿ ಚಹಾರ್ ಅಂತಹ ಸಾಕಷ್ಟು ಆಟಗಾರರನ್ನು ಬೆಳಕಿಗೆ ತಂದಿದ್ದಾರೆ. ಚಹಾರ್ ಆರಂಭಿಕ ಓವರ್ಗಳಲ್ಲಿ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ. ಜೊತೆಗೆ ಸ್ವಿಂಗ್ ಬೌಲಿಂಗ್ನಿಂದ ಪವರ್ ಪ್ಲೇನಲ್ಲೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಜೊತೆಗೆ ಡತ್ ಓವರ್ ಸ್ಪೆಷಲಿಸ್ಟ್ ಡ್ವೇನ್ ಬ್ರಾವೋ ತಂಡದಲ್ಲಿರುವುದರಿಂದ ಧೋನಿ ಬೌಲಿಂಗ್ ಸಂಯೋಜನೆಯನ್ನು ಬದಲಾಯಿಸುತ್ತಿಲ್ಲ ಎಂಬುದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ.