ಮುಂಬೈ: ವಿಶ್ವಕಪ್ ನಂತರ ನಡೆದ ವಿಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ಸ್ವತಃ ಅಲಭ್ಯರಾಗಿದ್ದ ಮಾಜಿ ನಾಯಕ ಎಂ ಎಸ್ ಧೋನಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದಲೂ ದೂರ ಉಳಿಯುವ ಸಾಧ್ಯತೆ ಇದೆ.
ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದ ಧೋನಿ ದಕ್ಷಿಣ ಆಫ್ರಿಕಾ ಸರಣಿಗೆ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ, ಮೂಲಗಳ ಪ್ರಕಾರ ಧೋನಿ ಮುಂದಿನ ಸರಣಿಗೂ ಸ್ವತಃ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ವಿಶ್ವಕಪ್ ನಂತರ ಧೋನಿ ನಿವೃತ್ತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ, ಧೋನಿ ಈ ಕುರಿತು ಇದುವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಇದೀಗ ಹರಿಣಗಳ ವಿರುದ್ಧವೂ ಕಣಕ್ಕಿಳಿಯದಿರುವುದರಿಂದ ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.
ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯಂತೆ ವಿಶ್ವಕಪ್ ಹತ್ತಿರ ಬರುತ್ತಿದ್ದು, ಇನ್ನು ಕೇವಲ 22 ಪಂದ್ಯಗಳು ಮಾತ್ರ ಭಾರತ ತಂಡ ಆಡಲಿದೆ. ಅಷ್ಟರಲ್ಲಿ ಉತ್ತಮ ವಿಕೆಟ್ ಕೀಪರ್ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಮುಂದಾಗಿದೆ. ರಿಷಭ್ ಪಂತ್ಗೆ ಎಲ್ಲ ವಿಭಾಗದ ಕ್ರಿಕೆಟ್ಗೂ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.
ಇನ್ನು ಧೋನಿ ಆಯ್ಕೆಯ ಬಗ್ಗೆ ಅವರು ಸಮರ್ಪಕ ಹೇಳಿಕೆ ನೀಡಿಲ್ಲ. ಧೋನಿ ನಿವೃತ್ತಿ ಅವರಿಗೆ ಬಿಟ್ಟ ವಿಚಾರ. ಅವರ ಆಯ್ಕೆ ಬಗ್ಗೆ ಆಯ್ಕೆ ಸಮಿತಿ, ಧೋನಿ ನಿವೃತ್ತಿ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದಿತ್ತು.