ಮ್ಯಾಂಚೆಸ್ಟರ್: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ನೀಡಿ ವ್ಯಾಪಕ ಟೀಕೆ ಎದುರಿಸಿದ್ದ ಮ್ಯಾಚ್ ಫಿನಿಷರ್ ಧೋನಿ ಇದೀಗ ಬ್ಯಾಟ್ನಿಂದಲೇ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.
ವಿಶ್ವಕಪ್ನಲ್ಲಿ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಬರೋಬ್ಬರಿ 52 ಎಸೆತಗಳಲ್ಲಿ 28ರನ್ಗಳಿಕೆ ಮಾಡಿದ್ದ ಧೋನಿ ಕ್ರೀಡಾಭಿಮಾನಿಗಳಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರು. ಇದಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಅವರಿಗೆ ಉತ್ತರಿಸಿದ್ದಾರೆ. 61 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡರಿ ಸೇರಿ ಅಜೇಯ 56ರನ್ಗಳಿಕೆ ಮಾಡಿದರು. ಇದರೊಂದಿಗೆ ಟೀಕೆ ಮಾಡುವವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.
ಆರಂಭದಿಂದಲೂ ನಿಧಾನಗತಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಧೋನಿ 45 ಎಸೆತಗಳಲ್ಲಿ 26ರನ್ಗಳಿಕೆ ಮಾಡಿದ್ದರು. ತದನಂತರದ 30ರನ್ಗಳನ್ನ ಕೇವಲ 16 ಎಸೆತಗಳಲ್ಲಿ ಗಳಿಕೆ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಎರಡು ಭರ್ಜರಿ ಸಿಕ್ಸರ್ ಸಹ ಸಿಡಿಸಿದ್ದಾರೆ. ಇನ್ನು ಧೋನಿ ಅವರನ್ನ ಸುಲಭವಾಗಿ ಸ್ಟಂಪ್ ಮಾಡುವ ಅವಕಾಶ ಪಡೆದುಕೊಂಡಿದ್ದರೂ ವೆಸ್ಟ್ ಇಂಡೀಸ್ ಮಿಸ್ ಮಾಡಿದ್ದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.