ಮುಂಬೈ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಒಂದು ಕೇಂದ್ರಬಿಂದುವಾಗಿರುವ 2011ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಸಿಡಿಸಿದ ಕೊನೆಯ ಸಿಕ್ಸರ್ ಬಿದ್ದ ಸ್ಥಳದಲ್ಲಿದ್ದ ಕುರ್ಚಿಯನ್ನು ಧೋನಿಗೆ ಸಮರ್ಪಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದೆ.
2011 ರಲ್ಲಿ ಶ್ರೀಲಂಕಾ ವಿರುದ್ಧ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಭವ್ಯವಾದ ಸಿಕ್ಸರ್ ಮೂಲಕ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ತಂದುಕೊಟ್ಟಿದ್ದರು. ಈ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಮಹೇಂದ್ರ ಸಿಂಗ್ ಧೋನಿ ನನಸಾಗಿಸಿದ್ದರು.
ಆದರೆ ಆಗಸ್ಟ್ 15ರಂದು ಧೋನಿ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಇದರ ಬೆನ್ನಲ್ಲೇ ದೇಶದ ಕ್ರೀಡೆಗೆ ಅಪಾರ ಸೇವೆ ನೀಡಿದರುವ ಧೋನಿಗೆ ಫೈನಲ್ ಪಂದ್ಯದಲ್ಲಿ ಚೆಂಡು ಬಿದ್ದ ಸೀಟ್ ಅನ್ನು ಶಾಶ್ವತವಾಗಿ ಸಮರ್ಪಿಸಬೇಕೆಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಪೆಕ್ಸ್ ಕೌನ್ಸಿಲ್ ಎಂಸಿಎಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ನೀಡಿದ ಅಪಾರ ಕೊಡುಗೆಗೆ ಕೃತಜ್ಞತೆ ಮತ್ತು ಗೌರವ ಸಲ್ಲಿಸುವ ಸಲುವಾಗಿ, ಎಂಸಿಎ ಪ್ರಸಿದ್ಧ ವಿಶ್ವಕಪ್ ವಿಜೇತ ಸಿಕ್ಸ್ನಲ್ಲಿ ಚೆಂಡು ಬಿದ್ದ ಸ್ಟ್ಯಾಂಡ್‌ನಲ್ಲಿ ಅವರ ಹೆಸರಿನಲ್ಲಿ ಶಾಶ್ವತ ಒಂದು ಸೀಟನ್ನು ಮೀಸಲಿಡಬೇಕು" ಎಂದು ಪತ್ರದಲ್ಲಿ ಬರೆಯಲಾಗಿದೆ.
ಧೋನಿ ಬಾರಿಸಿದ ಸಿಕ್ಸರ್ ಬಿದ್ದ ಚೇರನ್ನು ಹುಡುಕಿ ಅದಕ್ಕೆ ಬಣ್ಣ ಹೊಡೆದು ಅದನ್ನು ಅವರ ಹೆಸರಿಗೆ ಶಾಶ್ವತವಾಗಿ ಅರ್ಪಿಸಲಾಗುವುದು ಎನ್ನಲಾಗಿದೆ. 2015ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಕಿವೀಸ್ನ ಗ್ರ್ಯಾಂಟ್ ಎಲಿಯಟ್ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ಗೆ ಬಾರಿಸಿದ ಸಿಕ್ಸರ್ನಲ್ಲಿ ಚೆಂಡು ಬಿದ್ದ ಸ್ಥಳದಲ್ಲಿನ ಚೇರನ್ನು ಅವರ ಹೆಸರಿಗೆ ಈಗಾಗಲೇ ಮೀಸಲಿಡಲಾಗಿದೆ.