ಹೈದರಾಬಾದ್: ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಮೈದಾನಕ್ಕಿಳಿಯದೇ ಸುಮಾರು ನಾಲ್ಕು ತಿಂಗಳುಗಳೇ ಕಳೆದಿದೆ. ಧೋನಿ ಕಂಬ್ಯಾಕ್ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇದ್ದು, ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.
ಧೋನಿ ಮತ್ತೆ ಮೈದಾನಕ್ಕಿಳಿಯುವ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದ್ದರೂ ಭಾರತದ ಪರವಾಗಿ ಅಲ್ಲ ಎನ್ನುವುದು ಉಲ್ಲೇಖನೀಯ. ಇದಲ್ಲದೇ ಧೋನಿ ಕಂಬ್ಯಾಕ್ ಮುಂದಿನ ವರ್ಷ ಮಾರ್ಚ್ನಲ್ಲಿ ಎನ್ನಲಾಗಿದೆ.
13ನೇ ಆವೃತ್ತಿಯ ಐಪಿಎಲ್ಗೂ ಮುನ್ನ ನಡೆಯಲಿರುವ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವಿನ ಎರಡು ಟಿ-20 ಪಂದ್ಯದಲ್ಲಿ ಧೋನಿ ಏಷ್ಯಾ ತಂಡದ ಪರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬಂದಿದೆ. ಆದರೆ, ಬಿಸಿಬಿ ಮನವಿಗೆ ಬಿಸಿಸಿಐ ಹಾಗೂ ಧೋನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2020ರ ಮಾರ್ಚ್ 18 ಹಾಗೂ 21ರಂದು ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವಿನ ಪಂದ್ಯದಲ್ಲಿ ಧೋನಿ ಸೇರಿದಂತೆ ಭಾರತದ ಏಳು ಆಟಗಾರರು ನೀಡಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್(ಬಿಸಿಬಿ) ಬಿಸಿಸಿಐಗೆ ಮನವಿ ಮಾಡಿದೆ.
ಐಸಿಸಿ ಮಾನ್ಯತೆ ಪಡೆದಿರುವ ಈ ಪಂದ್ಯಕ್ಕೆ ಧೋನಿ ಹೊರತಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಅವಶ್ಯಕತೆ ಇದೆ ಎಂದು ಬಿಸಿಬಿ ಹೇಳಿದೆ.
ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ವಿಂಡೀಸ್ ಪ್ರವಾಸ, ದ.ಆಫ್ರಿಕಾ ಹಾಗೂ ಬಾಂಗ್ಲಾ ಸರಣಿಯಿಂದ ಧೋನಿ ದೂರ ಉಳಿದಿದ್ದರು. ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಂಡೀಸ್ ಸರಣಿಯಲ್ಲೂ ಧೋನಿ ಆಡುತ್ತಿಲ್ಲ.