ಮುಂಬೈ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಭರ್ಜರಿ ತಯಾರಿ ನಡೆಸಿದ್ದು, ಈಗಾಗಲೇ ನೆಟ್ಸ್ನಲ್ಲಿ ಐದು ಸಿಕ್ಸರ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಮಧ್ಯೆ ಅವರು ಮತ್ತೊಮ್ಮೆ ಟೀಂ ಇಂಡಿಯಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಕ್ರಿಕೆಟ್ ಆಯ್ಕೆ ಸಮಿತಿಗೆ ಹೊಸದಾಗಿ ಆಯ್ಕೆಗೊಂಡಿರುವ ಸುನೀಲ್ ಜೋಶಿ ನೇತೃತ್ವದ ತಂಡ ಈ ಕುರಿತು ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಾಗಿ ತಂಡ ಪ್ರಕಟಗೊಳಿಸಿದ ಬಳಿಕ ಮಾತನಾಡಿರುವ ಅವರು, ಖಂಡಿತವಾಗಿಯೂ ಅವರಿಗೆ ಅವಕಾಶವಿದೆ. ಆದರೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವರಿಂದ ಬರುವ ಪ್ರದರ್ಶನದ ಮೇಲೆ ಎಲ್ಲವೂ ನಿಂತಿದೆ ಎಂದು ತಿಳಿಸಿದ್ದಾರೆ.
ಏಕದಿನ ಸರಣಿಗಾಗಿ ಈಗಾಗಲೇ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಕಮ್ಬ್ಯಾಕ್ ಮಾಡಿದ್ದು, ಹರಿಣಗಳ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಐಪಿಎಲ್ನಲ್ಲಿ ಆಟಗಾರರು ನೀಡುವ ಪ್ರದರ್ಶನ ಕೂಡ ಮಹತ್ವ ಪಡೆದುಕೊಳ್ಳಲಿದ್ದು, ಅದ್ಭುತ ಪ್ರದರ್ಶನ ನೀಡುವ ಪ್ರತಿಭೆಗಳು ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಚಾನ್ಸ್ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಬಳಿಕ ಕ್ರಿಕೆಟ್ನಿಂದ ಧೋನಿ ದೂರು ಉಳಿದಿದ್ದಾರೆ. ಇದೀಗ ಐಪಿಎಲ್ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಈ ಹಿಂದೆ ಕೂಡ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಇದೇ ಮಾತು ಹೇಳಿದ್ದು, ಐಪಿಎಲ್ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಅವರ ಭವಿಷ್ಯ ನಿಂತಿದೆ.