ನವದೆಹಲಿ: ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರಿಗೆ ತಾವು 2019ರ ವಿಶ್ವಕಪ್ಗೆ ಆಯ್ಕೆಯಾಗುವುದಿಲ್ಲ ಅನ್ನೋದು ಅರಿವಿಗೆ ಬಂದಿದ್ದು ಹೇಗೆ ಎಂಬುದನ್ನು ನೆನೆಪಿಸಿಕೊಂಡಿದ್ದಾರೆ.
ಯುವರಾಜ್ ಸಿಂಗ್ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೇಯ ಬಾರಿ ಕ್ರೀಡಾಂಗಣಕ್ಕೆ ಇಳಿದಿದ್ದರು. ಆ ವರ್ಷ ಯುವಿ ತಂಡಕ್ಕೆ ಕಮ್ಬ್ಯಾಕ್ ಮಾಡಿ 11 ಪಂದ್ಯಗಳಲ್ಲಿ 372 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವರು 150 ರನ್ ಸಿಡಿಸಿದ್ದರು.
"ನಾನು ಭಾರತ ತಂಡಕ್ಕೆ ಮರಳಿ ಬಂದಾಗ ಕೊಹ್ಲಿ ಸಾಕಷ್ಟು ಬೆಂಬಲ ನೀಡಿದ್ದರು. ಆದರೆ, 2019ರ ವಿಶ್ವಕಪ್ ತಂಡದಲ್ಲಿ ನನಗೆ ಅವಕಾಶವಿಲ್ಲ ಎಂಬುದನ್ನು ಧೋನಿ ಅರ್ಥವಾಗುವಂತೆ ಮಾಡಿದರು. 2019ರ ವಿಶ್ವಕಪ್ ಯೋಜನೆಯಲ್ಲಿ ಆಯ್ಕೆದಾರರು ನಿನ್ನನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿಕೊಟ್ಟಿದ್ದರು. ಈ ಮೂಲಕ ನನ್ನೊಳಗೆ ಸ್ಪಷ್ಟತೆ ಮೂಡುವಂತೆ ಮಾಡಿದ್ದೇ ಅವರು. ಅವರು ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದರು" ಎಂದು ಯುವಿರಾಜ್ ಸಿಂಗ್ ಹೇಳಿದ್ದಾರೆ.
ಮುಂದುವರೆದು ಧೋನಿ ಬಗ್ಗೆ ಮಾತನಾಡುತ್ತಾ, "ಎಂಎಸ್ 2011ರವರೆಗೂ ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟಿದ್ದರು. ಆದರೆ ನಾನು ಕ್ಯಾನ್ಸರ್ನಿಂದ ಹೊರಬಂದ ಬಳಿಕ ಅವರಲ್ಲಿದ್ದ ನಂಬಿಕೆ ಬದಲಾಯಿತು" ಎಂದರು.
"ನೀನು ನನ್ನ ಪ್ರಮುಖ ಆಟಗಾರ" ಎಂದು ಅವರು ಹೇಳುತ್ತಿದ್ದರು. ಆದರೆ ಕ್ಯಾನ್ಸರ್ ಚಿಕಿತ್ಸೆ ಮುಗಿಸಿ ಬಂದ ನಂತರ ಆಟದಲ್ಲಿ ಬದಲಾವಣೆ ಕಂಡುಬಂದಿತು. ಅಷ್ಟರಲ್ಲಿ ತಂಡದಲ್ಲೂ ಸಾಕಷ್ಟು ಬದಲಾವಣೆಯಾಗಿತ್ತು. ಹಾಗಾಗಿ, 2015ರ ವಿಶ್ವಕಪ್ನಲ್ಲಿ ಅವಕಾಶ ಸಿಗದಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ನಾಯಕನಾಗಿ ಕೆಲವೊಮ್ಮೆ ಎಲ್ಲವನ್ನೂ ಸಮರ್ಥಿಸಲು ಸಾಧ್ಯವಿಲ್ಲ ಅನ್ನೋದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.