ಹೈದರಾಬಾದ್: ವಿಶ್ವಕಪ್ ಟೂರ್ನಿ ಬಳಿಕ ಮೈದಾನದಿಂದ ಕೊಂಚ ದೂರ ಸರಿದಿರುವ ಹಿರಿಯ ಆಟಗಾರ ಎಂ ಎಸ್ ಧೋನಿ ಇದೀಗ ಬ್ರೇಕ್ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ಬ್ರೇಕ್ನಲ್ಲಿರುವ ಧೋನಿ ಇದನ್ನು ಮತ್ತಷ್ಟು ವಿಸ್ತರಿಸಿದ್ದಾರೆ ಎನ್ನಲಾಗಿದ್ದು, ಪರಿಣಾಮ ನವೆಂಬರ್ ತನಕ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಮೈದಾನದಲ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ. ಅಕ್ಟೋಬರ್ನಿಂದ ನವೆಂಬರ್ ಅವಧಿಯಲ್ಲಿ ನಡೆಯುವ ವಿಜಯ್ ಹಜಾರೆ ಟ್ರೋಫಿ, ಬಾಂಗ್ಲಾದೇಶ ವಿರುದ್ಧದ ತವರಿನ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಡಿಸೆಂಬರ್ನಲ್ಲಿ ವಿಂಡೀಸ್ ತಂಡ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ನಡೆಯಲಿರುವ ಟಿ20 ಸರಣಿಯಲ್ಲಿ ಧೋನಿ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಧೋನಿ ನಿವೃತ್ತಿಯ ಬಗ್ಗೆಯೂ ಕಳೆದ ಕೆಲವು ತಿಂಗಳಿನಿಂದ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಹಿರಿಯ ಆಟಗಾರರು ತಮ್ಮ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಧೋನಿ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. ವಿಶ್ವಕಪ್ ಬಳಿಕ ಧೋನಿ ಭಾರತೀಯ ಸೇನೆಯಲ್ಲಿ ತರಬೇತಿ ಹಾಗೂ ಸೇವೆ ಸಲ್ಲಿಸಲು ವಿಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರು. ಸದ್ಯ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಧೋನಿ ಮೈದಾನಕ್ಕಿಳಿದಿಲ್ಲ.