ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಮೈದಾನದಲ್ಲಿ ಚುರುಕುತನ ಹಾಗೂ ಚಾಣಾಕ್ಷತನಕ್ಕೆ ಹೆಸರುವಾಸಿಯಾದ ಕ್ರಿಕೆಟಿಗ. ಹೀಗಿರುವಾಗ ಎಂಎಸ್‌ಡಿ ಭಾರತದಲ್ಲಿ ಎರಡನೇ ಅತ್ಯಂತ ಜನಪ್ರಿಯ ವ್ಯಕ್ತಿ ಎನ್ನುವ ವಿಚಾರ ಬಹಿರಂಗವಾಗಿದೆ.
ಸುಮಾರು ಎರಡು ತಿಂಗಳಿನಿಂದ ಮೈದಾನದಲ್ಲಿ ಕಾಣಿಸಿಕೊಳ್ಳದಿದ್ದರೂ ಧೋನಿ ಜನಪ್ರಿಯತೆ ಎಳ್ಳಷ್ಟೂ ಕುಗ್ಗಿಲ್ಲ. ಯುಗೌ(YouGov) ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಮಾಹಿ ಕಾಣಿಸಿಕೊಂಡಿದ್ದಾರೆ.

ಮೈದಾನದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿಗಿಂತ ಐದು ಸ್ಥಾನ ಕೆಳಗಿದ್ದಾರೆ ಎನ್ನುವುದು ಗಮನಾರ್ಹ ಅಂಶ! ಅಗ್ರ ಐದರಲ್ಲಿ ಭಾರತದ ಮೂವರು ವ್ಯಕ್ತಿಗಳು ಇದ್ದು, ಧೋನಿ ಮಾತ್ರವೇ ಕ್ರೀಡಾಕ್ಷೇತ್ರದವರಾಗಿದ್ದಾರೆ.

ಯುಗೌ ವಿಶ್ವಾದ್ಯಂತ ಸುಮಾರು 42 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ಲಿಸ್ಟ್ನಲ್ಲಿ ಪ್ರಧಾನಿ ಮೋದಿ ಹಾಗೂ ಧೋನಿ ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ. ಮೋದಿ ಜನಪ್ರಿಯತೆ ಶೇ.15.66ರಷ್ಟಿದ್ದರೆ, ಧೋನಿ ಜನಪ್ರಿಯತೆ ಶೇ.8.58ರಷ್ಟಿದೆ.
ನಂತರದ ಸ್ಥಾನದಲ್ಲಿ ರತನ್ ಟಾಟಾ, ಬರಾಕ್ ಒಬಾಮ ಹಾಗೂ ಬಿಲ್ ಗೇಟ್ಸ್ ಇದ್ದಾರೆ. ವಿಶೇಷವೆಂದರೆ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 21 ಸ್ಥಾನದಲ್ಲಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರಂಪ್ಗಿಂತ ಎರಡು ಸ್ಥಾನ ಮೇಲಿರುವುದು ಇನ್ನೊಂದು ಅಚ್ಚರಿ..!
ಮಹಿಳೆಯರಲ್ಲಿ ಮೇರಿ ಕೋಮ್ ಟಾಪ್..!
ಮಹಿಳೆಯರ ವಿಭಾಗದಲ್ಲಿ ಬಾಕ್ಸರ್ ಮೇರಿ ಕೋಮ್ ಅಗ್ರಸ್ಥಾನ ಪಡೆದಿದ್ದಾರೆ. ನಂತರದಲ್ಲಿ ಕಿರಣ್ ಬೇಡಿ, ಲತಾ ಮಂಗೇಶ್ಕರ್ ಹಾಗೂ ಇತ್ತೀಚೆಗೆ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಣಿಸಿಕೊಂಡಿದ್ದಾರೆ.

ಕ್ರೀಡಾ ಕ್ರೇತ್ರದಲ್ಲಿ ಭಾರತದಲ್ಲಿ ಧೋನಿಯೇ ಟಾಪ್..!
ಕ್ರೀಡಾ ಕ್ಷೇತ್ರದಲ್ಲಿ ಧೋನಿ ಅತ್ಯಂತ ಜನಪ್ರಿಯತೆ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.