ಪೋರ್ಟ್ ಆಫ್ ಸ್ಪೇನ್: ಬುಧವಾರ ಕೊನೆಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೊಹ್ಲಿ ವಿಂಡೀಸ್ ವಿರುದ್ಧ 9ನೇ ಶತಕ ಸಿಡಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ತಮ್ಮ 43 ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧವೇ 9ಶತಕ ದಾಖಲಿಸುವ ಮೂಲಕ ಒಂದೇ ತಂಡದ ವಿರುದ್ಧ ಹೆಚ್ಚು ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದರು. ಆದರೆ ಅವರು 9 ಶತಕಕ್ಕಾಗಿ 70 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕೊಹ್ಲಿ ಈ ಸಾಧನೆಗಾಗಿ ಕೇವಲ 35 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ವಿರಾಟ್ ಅವರು ವಿಂಡೀಸ್ ಅಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳ ವಿರುದ್ಧ ತಲಾ ಎಂಟು ಶತಕ ಗಳಿಸಿದ್ದಾರೆ. ಸಚಿನ್ ಕೂಡ ಶ್ರೀಲಂಕಾ ವಿರುದ್ಧ 8 ಶತಕ ಗಳಿಸಿದ್ದರು.
ಇವರಿಬ್ಬರನ್ನು ಹೊರತುಪಡಿಸಿದರೆ ಆ್ಯರೋನ್ ಫಿಂಚ್ ಇಂಗ್ಲೆಂಡ್ ವಿರುದ್ಧ 7, ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 7, ಶಾಹಿದ್ ಅನ್ವರ್ ಶ್ರೀಲಂಕಾ ವಿರುದ್ಧ 7 ಹಾಗೂ ಜಯಸೂರ್ಯ ಭಾರತದ ವಿರುದ್ಧ 7 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.