ಜೋಹರ್ನ್ಬರ್ಗ್: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ 4 ವಿಕೆಟ್ಗಳ ಜಯ ಸಾಧಿಸಿ, ಟಿ-20 ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
4 ಪಂದ್ಯಗಳ ಟಿ-20 ಸರಣಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 188 ರನ್ ಗಳಿಸಿತ್ತು. ನಾಯಕ ಎನ್ರಿಚ್ ಕ್ಲಾಸೆನ್ ಕೇವಲ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 50 ರನ್ ಮತ್ತು ಐಡೆನ್ ಮ್ಯಾರ್ಕ್ರಮ್ 32 ಎಸೆತಗಳಲ್ಲಿ 52, ವ್ಯಾನ್ ಬಿಲ್ಜನ್ 34 ರನ್ ಗಳಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ಪಾಕಿಸ್ತಾನ ಪರ ಶಹೀನ್ ಶಾ ಅಫ್ರಿದಿ 45ಕ್ಕೆ 1, ಮೊಹಮ್ಮದ್ ನವಾಸ್ 21ಕ್ಕೆ 2 ಮತ್ತು ಹಸನ್ ಅಲಿ 28ಕ್ಕೆ 2 ಮತ್ತು ರಾವೂಫ್ 37ಕ್ಕೆ 1 ವಿಕೆಟ್ ಪಡೆದು ಕೊನೆಯ 5 ಓವರ್ಗಳನ್ನು ರನ್ ಬರದಂತೆ ನಿಯಂತ್ರಿಸಿದರು.
189 ರನ್ಗಳ ಗುರಿ ಪಡೆದ ಪಾಕಿಸ್ತಾನ ರಿಜ್ವಾನ್ರ ಅಜೇಯ ಅರ್ಧಶತಕ ಮತ್ತು ಫಹೀಮ್ ಅಶ್ರಫ್ರ ಸ್ಫೋಟಕ 30 ರನ್ಗಳ ನೆರವಿನಿಂದ ಇನ್ನೊಂದು ಎಸೆತ ಉಳಿದಿರುವಂತೆ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ರಿಜ್ವಾನ್ 50 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 74 ರನ್ ಗಳಿಸಿದರೆ, ಅಶ್ರಫ್ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 30 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಫಖರ್ ಝಮಾನ್ 27, ಬಾಬರ್ 13, ಹೈದರ್ ಅಲಿ 14 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಬ್ಯೂರನ್ ಹೆಂಡ್ರಿಕ್ಸ್ 32ಕ್ಕೆ 3, ಶಂಸಿ 29ಕ್ಕೆ 2 ವಿಕೆಟ್ ಪಡೆದರು. ಇವರಿಬ್ಬರಿಗೂ ಉತ್ತಮ ಬೆಂಬಲ ಸಿಗದ ಕಾರಣ ಹರಿಣ ಪಡೆ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.