ಲಾಹೋರ್: ಪಾಕ್ ತಂಡದ ವೇಗಿ ಮೊಹಮ್ಮದ್ ಅಮೀರ್ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಆಶ್ಚರ್ಯ ಮೂಡಿಸಿದ್ದರು. ಇದೀಗ ಬ್ರಿಟನ್ ಪೌರತ್ವಕ್ಕೆ ಅರ್ಜಿ ಹಾಕುವ ಮೂಲಕ ಐಪಿಎಲ್ನಲ್ಲಾಡುವ ಕನಸು ಕಾಣುತ್ತಿದ್ದಾರೆಯೇ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ವಿಶ್ವಕಪ್ನಲ್ಲಿ ಮಿಂಚಿದ ಬೌಲರ್ ಮೊಹಮ್ಮದ್ ಅಮೀರ್ ಕೇವಲ 27 ವರ್ಷಕ್ಕೆ ಟೆಸ್ಟ್ ಕ್ರಿಕೆಟ್ಗೆ ಗುಡ್‌ಬೈ ಹೇಳಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದರು. ಇದೀಗ ನಿವೃತ್ತಿ ಬೆನ್ನಲ್ಲೇ ಬ್ರಿಟನ್ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಅಮೀರ್ 2016 ರಲ್ಲಿ ಬ್ರಿಟನ್ ಮೂಲದ ನರ್ಗಿಸ್ ಮಲಿಕ್ ಎಂಬುವವರನ್ನು ಮದುವೆಯಾಗಿದ್ದಾರೆ. ಇದರಿಂದ ಬ್ರಿಟನ್ನಲ್ಲಿ ನೆಲೆಸಲು ಅವರು ಕೇವಲ 30 ತಿಂಗಳ ವೀಸಾ ಹೊಂದಿದ್ದಾರೆ. ಆದರೆ ಇದೀಗ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಇಂಗ್ಲೆಂಡ್ನಲ್ಲಿ ನೆಲೆಸುವ ಉದ್ದೇಶದಿಂದ ಅಲ್ಲಿನ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ಐಪಿಎಲ್ ಮೇಲೆ ಕಣ್ಣಿಟ್ರಾ ಅಮೀರ್?
2008ರ ಮುಂಬೈ ಉಗ್ರರ ದಾಳಿ ಪ್ರಕರಣದ ನಂತರ ಐಪಿಎಲ್ನಲ್ಲಿ ಆಡದಂತೆ ಪಾಕಿಸ್ತಾನದ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಆದರೆ ಪಾಕ್ ಬೌಲರ್ ಅಜರ್ ಮೊಹಮ್ಮದ್ ಬ್ರಿಟನ್ ಪೌರತ್ವದ ಆಧಾರದ ಮೇಲೆ ಐಪಿಎಲ್ನಲ್ಲಿ 2014-15 ಸೀಸನ್ನಲ್ಲಿ ಪಾಲ್ಗೊಂಡಿದ್ದರು.
ಇದೀಗ ಅಮೀರ್ ಕೂಡ ಅಜರ್ ಹಾದಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.