ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಭಾರತ ತಂಡದ ಬಹುದೊಡ್ಡ ಶಕ್ತಿಯಾಗಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.
"ಮಾಯಾಂಕ್ ಅಗರ್ವಾಲ್ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇದೆ. ಅವನು ಹೆಚ್ಚು ಪ್ರತಿಭಾನ್ವಿತನಾಗಿರದೇ ಇರಬಹುದು. ಆದರೆ, ಆತ ಖಂಡಿತವಾಗಿಯೂ ತನ್ನ ಆಟದ ಮೇಲೆ ಸಂಘಟಿತನಾಗಿರುತ್ತಾನೆ. ಮಯಾಂಕ್ ಬೌಲರ್ಗಳನ್ನು ವೀರೇಂದ್ರ ಸೆಹ್ವಾಗ್ ಅಥವಾ ಡೇವಿಡ್ ವಾರ್ನರ್ ಅವರಂತೆ ದಂಡಿಸದಿದ್ದರೂ ಆರಂಭಿಕ ಬ್ಯಾಟ್ಸ್ಮನ್ಗಿರಬೇಕಾದ ಮಾನಸಿಕ ಸ್ಪಷ್ಟತೆ ಹೊಂದಿದ್ದಾರೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಅಗರ್ವಾಲ್ ಜೊತೆ ಆರಂಭಿಕರಾಗಿ ಯಾರು ಕಣಕ್ಕಿಳಿದರೆ ಉತ್ತಮ ಎಂಬುದಕ್ಕೆ ಉತ್ತರಿಸಿರುವ ಗಂಭೀರ್, ಇದೇ ಮೊದಲ ಬಾರಿಗೆ ಆರಂಭಿಕರಾಗಿ ಹೊಸ ಜೋಡಿಯನ್ನು ಈ ಸರಣಿಯಲ್ಲಿ ಕಾಣಲಿದ್ದೇವೆ. ಪೃಥ್ವಿ ಶಾ ಅಥವಾ ಶುಬ್ಮನ್ ಗಿಲ್ ಇಬ್ಬರಲ್ಲಿ ಸಿಕ್ಕ ಅದ್ಭುತ ಅವಕಾಶವನ್ನು ಯಾರು, ಹೇಗೆ ಉಪಯೋಗಿಸಿಕೊಳ್ಳಲಿದ್ದಾರೆ ಎಂದು ನೋಡುವುದೇ ಆಸಕ್ತಿದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಮಯಾಂಕ್ ಜೊತೆಗೆ ಪೃಥ್ವಿ ಶಾರನ್ನು ಆಯ್ಕೆ ಮಾಡಲಾಗಿತ್ತು. ಶುಬ್ಮನ್ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ಪೂಜಾರ, ಕೊಹ್ಲಿ ಕಿವೀಸ್ ವಿರುದ್ಧ ಕಣಕ್ಕಿಳಿಯುವುದರಿಂದ ಶುಬ್ಮನ್ ಗಿಲ್ಗೆ ಅವಕಾಶ ಸಿಗುವುದು ಅನುಮಾನವಾಗಿದೆ.
ಶುಕ್ರವಾರ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಮೊದಲ ಟೆಸ್ಟ್ ವೆಲ್ಲಿಂಗ್ಟನ್ನಲ್ಲಿ ಆರಂಭವಾಗಲಿದೆ.