ಕೇಪ್ಟೌನ್: ತವರಿನಲ್ಲೇ ಟೆಸ್ಟ್ ಸರಣಿ ಕಳೆದುಕೊಂಡ ನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಫಾಫ್ ಡು ಪ್ಲೆಸಿಸ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಏಕದಿನ-ಕ್ರಿಕೆಟ್ ತಂಡಕ್ಕೆ ಯುವ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ಗೆ ನಾಯಕತ್ವ ವಹಿಸಿದೆ.
ತವರಿನಲ್ಲಿ ನಡೆದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಲ್ಲಿ ಕಳೆದುಕೊಂಡ ದಕ್ಷಿಣ ಆಫ್ರಿಕಾ, ಏಕದಿನ ಸರಣಿಯನ್ನು 1-1 ರಲ್ಲಿ ಡ್ರಾ ಸಾಧಿಸಿಕೊಂಡಿದೆ. ಬುಧವಾರ ನಡೆದ ಮೊದಲ ಟಿ20 ಪಂದ್ಯವನ್ನು 1 ರನ್ನಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಮೂಲಕ ಡಿಕಾಕ್ ನಾಯಕತ್ವದ ಮೇಲೆ ಕೋಚ್ ಮಾರ್ಕ್ ಬೌಷರ್ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಈ ಸರಣಿಗೂ ಮುನ್ನ ಸ್ಪೋರ್ಟ್ಸ್ ವೆಬ್ಸೈಟ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬೌಷರ್ ಡಿಕಾಕ್ ಭವಿಷ್ಯದಲ್ಲಿ ಯಶಸ್ವಿ ನಾಯಕರಾಗುತ್ತಾರೆ. ಭಾರತ ತಂಡಕ್ಕೆ ಎಂ ಎಸ್ ಧೋನಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮ್ ಹಾಗೂ ನಾಯಕನಾಗಿ ಯಾವ ರೀತಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೋ ಹಾಗೆ ಡಿಕಾಕ್ ದಕ್ಷಿಣ ಆಫ್ರಿಕಾ ತಂಡವನ್ನು ಕೊಂಡೊಯ್ಯಲಿದ್ದಾರೆ ಎಂದು ಅವರು ತಿಳಿಸಿದ್ದರು.
ಧೋನಿ ಭಾರತ ತಂಡದ ನಾಯಕನಾಗಿ ನೇಮಕಕೊಂಡಾಗ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಆದರೆ ಧೋನಿ ಭಾರತ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಇದೀಗ ಡಿಕಾಕ್ ಕೂಡ ಖಂಡಿತ ಧೋನಿ ಹಾದಿಯನ್ನೇ ಹಿಡಿಯಲಿದ್ದಾರೆ ಎಂದು ಯುವ ವಿಕೆಟ್ ಕೀಪರ್ ಬೆನ್ನಿಗೆ ನಿಂತಿದ್ದಾರೆ ಕೋಚ್.
ಧೋನಿ ಭಾರತ ತಂಡದ ನಾಯಕನಾಗಿ 2007ರ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡಕ್ಕೆ ಗೆದ್ದುಕೊಟ್ಟಿದ್ದರು. ಈ ಮೂಲಕ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.