ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮನೋಜ್ ತಿವಾರಿ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಭರ್ಜರಿ ತ್ರಿಶತಕ ಸಿಡಿಸುವ ಮೂಲಕ ಪಶ್ಚಿಮ ಬಂಗಾಳಕ್ಕೆ ಇನ್ನಿಂಗ್ಸ್ ಹಾಗೂ 303 ರನ್ಗಳ ಜಯ ತಂದುಕೊಟ್ಟಿದ್ದರು.
2020ರ ರಣಜಿ ಆವೃತ್ತಿಯಲ್ಲಿ ಬೆಂಗಾಲ್ ತಂಡದ ಹಿರಿಯ ಬ್ಯಾಟ್ಸ್ಮನ್ ಮನೋಜ್ ತಿವಾರಿ 303 ರನ್ಗಳಿಸುವ ಮೂಲಕ ಚೊಚ್ಚಲ ತ್ರಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಬೆಂಗಾಲ್ ತಂಡ 635 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ 34 ವರ್ಷದ ಮನೋಜ್ ತಿವಾರಿ(303*) ಆಕರ್ಷಕ ತ್ರಿಶತಕ ಸಿಡಿಸಿದರು. ಅವರು 414 ಎಸೆತಗಳಲ್ಲಿ 30 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ತಿವಾರಿ ಈ ಮೂಲಕ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ತ್ರಿಶತಕ ಸಿಡಿಸಿದ ಪಶ್ಚಿಮ ಬಂಗಾಳದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.
ಒಟ್ಟಾರೆ, ತಿವಾರಿ ರಣಜಿ ಕ್ರಿಕೆಟ್ ಇತಿಹಾಸದಲ್ಲಿ 45 ನೇ ತ್ರಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಬೆಂಗಾಲ್ ತಂಡ 635 ರನ್ಗಳಿಗೆ ಡಿಕ್ಲೇರ್ ಘೋಷಿಸಿಕೊಂಡಿತು. ಇದಕ್ಕುತ್ತರವಾಗಿ ಹೈದರಾಬಾದ್ ಮೊದಲ ಇನ್ನಿಂಗ್ಸ್ನಲ್ಲಿ 171, ಎರಡನೇ ಇನ್ನಿಂಗ್ಸ್ನಲ್ಲಿ 161 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 303 ರನ್ಗಳ ಹೀನಾಯ ಸೋಲುಕಂಡಿದೆ.