ಬೋಕಾರೋ: ಮೊನ್ನೆಯಷ್ಟೇ ರಾಷ್ಟ್ರೀಯ ತಂಡದ ಪರ ಆಡಿಬಂದಿರುವ ಮನೀಶ್ ಪಾಂಡೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.
ಜಾರ್ಖಂಡ್ನ ಬೊಕಾರೋದ ಬಿಎಸ್ಎಲ್ ಕ್ರೀಡಾಂಗಣದಲ್ಲಿ ಸರ್ವೀಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪಾಂಡೆ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಮನೀಶ್ ಕೇವಲ 44 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದರು. ಇದು ಅವರ ಟಿ20 ಕ್ರಿಕೆಟ್ನಲ್ಲಿ ಬಂದ ಮೂರನೇ ಶತಕವಾಗಿದೆ.
ಆರಂಭಿಕ ರೋಹನ್ ಕಡಮ್ ಅವರನ್ನು ಬೇಗ ಕಳೆದುಕೊಂಡ ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆ ಹಾಗೂ ದೇವದತ್ ಪಡಿಕ್ಕಲ್ 167 ರನ್ಗಳ ಜೊತೆಯಾಟ ನೀಡಿದರು.
ಪಡಿಕ್ಕಲ್ 43 ಎಸೆತಗಳಲ್ಲಿ 4 ಸಿಕ್ಸರ್, 8 ಬೌಂಡರಿ ಸಹಿತ 75 ರನ್ ಗಳಿಸಿದರು. ನಂತರ ಪಾಂಡೆ ಜೊತೆಗೂಡಿದ ಕೆ.ಗೌತಮ್ 15 ಎಸೆತಗಳಲ್ಲಿ 23 ರನ್ ಸಿಡಿಸಿದರು. ಕೊನೆವರೆಗೂ ಔಟಾಗದೆ ಉಳಿದ ಪಾಂಡೆ 54 ಎಸೆತಗಳಲ್ಲಿ 129 ರನ್ ಕಲೆಹಾಕಿದರು. ಅವರ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿ ಕೂಡಿತ್ತು.
ಒಟ್ಟಾರೆ ಕರ್ನಾಟಕ ತಂಡ 20 ಓವರ್ಗಳಲ್ಲಿ ಬರೋಬ್ಬರಿ 250 ರನ್ ಪೇರಿಸಿದೆ.