ಹೈದರಾಬಾದ್: ಯಾರ್ಕರ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಲಸಿತ್ ಮಲಿಂಗಾ ನಿವೃತ್ತಿಯ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಲಸಿತ್ ಮಲಿಂಗಾ ನಿವೃತ್ತಿ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ತಂಡ ನಾಯಕ ಧಿಮುತ್ ಕರುಣಾರತ್ನೆ, ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ ಬಳಿಕ ಮಲಿಂಗಾ ವಿದಾಯ ಹೇಳಿಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾ ವಿರುದ್ಧ ನಡೆಯುವ ಮೊದಲ ಪಂದ್ಯದ ಬಳಿಕ ಮಲಿಂಗಾ ನಿವೃತ್ತಿ ಘೋಷಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಮಲಿಂಗಾ ನನ್ನೊಂದಿಗೆ ಹೇಳಿದ್ದಾರೆ. ಆಯ್ಕೆ ಸಮಿತಿಗೆ ಏನು ಹೇಳಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಕರುಣಾರತ್ನೆ ಹೇಳಿದ್ದಾರೆ.
ಕೊಲಂಬೋದಲ್ಲಿ ಜುಲೈ 26ರಂದು ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ವಿಶೇಷವೆಂದರೆ ಈ ಮ್ಯಾಚ್ನಲ್ಲಿ ಮಲಿಂಗಾ ಒಂದು ವಿಕೆಟ್ ಕಿತ್ತರೆ ಕೊಲಂಬೋ ಮೈದಾನದಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.