ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ತಂಡವನ್ನು ಭಾರತದಲ್ಲಿ ಮಣಿಸುವುದೇ ನಮ್ಮ ಗುರಿ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
2016 ಅಕ್ಟೋಬರ್ನಿಂದ ಟೆಸ್ಟ್ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ತಂಡ ಸತತ ಮೂರು ಬಾರಿ ಐಸಿಸಿ ಟೆಸ್ಟ್ ಚಾಂಪಿಯನ್ ಮೇಸ್ ಪಡೆದುಕೊಂಡಿದೆ. ಮೂರು ವರ್ಷಗಳಿಂದ ತವರಿನಲ್ಲಿ ಭಾರತ 11 ಟೆಸ್ಟ್ ಸರಣಿ ಗೆದ್ದು ಇತಿಹಾಸ ಬರೆದಿದೆ.
ಇದೀಗ ಭಾರತ ತಂಡವನ್ನು ಭಾರತದ ನೆಲದಲ್ಲಿ ಮಣಿಸುವುದು ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅಸಾಧ್ಯ ಎನ್ನಲಾಗುತ್ತಿದೆ. ಆದರೆ ಇತ್ತೀಚೆಗೆ ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಹೊರಬಂದು ಇಂಗ್ಲೆಂಡ್ನಲ್ಲೇ ಆ್ಯಶಸ್ ಟೆಸ್ಟ್ ಸರಣಿ ಡ್ರಾ ಸಾಧಿಸಿ ಆ್ಯಶಸ್ ಟ್ರೋಫಿಯನ್ನು ಉಳಿಸಿಕೊಂಡಿರುವ ಆಸೀಸ್, ಭಾರತ ತಂಡವನ್ನು ಮಣಿಸಲು ಸಿದ್ಧವಿದೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಇಎಸ್ಪಿಎನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಭಾರತ ತಂಡವನ್ನು ಅವರ ನೆಲದಲ್ಲಿ ಮಣಿಸುವುದು ಅತ್ಯಂತ ಕಠಿಣ. ಆದರೆ ಭಾರತವನ್ನು ಮಣಿಸುವುದೇ ನಮ್ಮ ಕೊನೆಯ ಗುರಿ. ಅದನ್ನೇ ನಿರೀಕ್ಷಿಸುತ್ತಿದ್ದೇವೆ. ನಮ್ಮ ತಂಡದಲ್ಲಿ ಇದೀಗ ಪ್ರಭುದ್ಧತೆ ಕಂಡುಬರುತ್ತಿದೆ. ಭಾರತದಲ್ಲಿ ಸರಣಿಯಾಡಲು ಇನ್ನು ಎರಡು ವರ್ಷ ಸಮಯವಿದ್ದು, ಅಷ್ಟರಲ್ಲಿ ತಂಡವನ್ನು ಬಲಿಷ್ಠಗೊಳಿಸಿಕೊಂಡು ಭಾರತಕ್ಕೆ ಸವಾಲೆಸೆಯಲು ಸಿದ್ಧಗೊಳ್ಳಲಿದ್ದೇವೆ" ಎಂದು ಲ್ಯಾಂಗರ್ ಹೇಳಿದ್ದಾರೆ.
ಭಾರತವನ್ನು ಮಣಿಸಲು ಕೆಲವು ಕೌಶಲ್ಯಗಳು ಅಗತ್ಯ. ಅದನ್ನು ರೂಢಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಅದಕ್ಕಾಗಿ ಉತ್ತಮವಾದ ಮಾನಸಿಕ ಕಠಿಣತೆ ಹಾಗೂ ಸಹನೆ ಅಗತ್ಯ. ಅದನ್ನು ಮೊದಲು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದಿದ್ದಾರೆ.
ಭಾರತ ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಬಾಂಗ್ಲಾ ವಿರುದ್ಧವೂ ಭಾರತವೇ ಮೇಲುಗೈ ಸಾಧಿಸಿದೆ. ಹೀಗಿರುವಾಗ ಯಾವ ರಾಷ್ಟ್ರವೂ ಭಾರತದಲ್ಲಿ ಕೊಹ್ಲಿ ಬಳಗಕ್ಕೆ ಸರಿಸಾಟಿಯಾಗಿ ನಿಲ್ಲಲು ಅಸಾಧ್ಯ ಎಂಬುದು ಕ್ರಿಕೆಟ್ ಜಗತ್ತಿನ ಮಾತಾಗಿದೆ.