ದುಬೈ: ಕ್ರಿಕೆಟ್ ಪಂದ್ಯದ ವೇಳೆ ಚೆಂಡಿನ ಗ್ರಿಪ್ಗಾಗಿ ಎಂಜಲು ಬಳಕೆಯನ್ನು ನಿಷೇಧಿಸಬೇಕು ಎಂದು ಕನ್ನಡಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿಯ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ. ಆದರೆ ಬೆವರು ಬಳಸುವುದರಿಂದ ಯಾವುದೇ ರೀತಿಯ ಅಪಾಯವಿಲ್ಲ ಎಂದು ಹೇಳಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಕ್ರಿಕೆಟ್ ಸಮಿತಿ, ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸರಣಿಯ ಆತಿಥ್ಯ ವಹಿಸುವ ದೇಶವೇ ಇಬ್ಬರೂ ಅಂಪೈರ್‌ಗಳನ್ನು ಪಂದ್ಯಕ್ಕೆ ಬಳಸಿಕೊಳ್ಳುವಂತೆ ಶಿಫಾರಸು ಮಾಡಿದೆ. ಈ ಮೊದಲು ಒಬ್ಬರು ಸ್ವದೇಶಿ ಹಾಗೂ ಮತ್ತೊಬ್ಬರು ಉಭಯ ತಂಡದವರಲ್ಲದೆ ಬೇರೆ ದೇಶದ ಅಂಪೈರ್ ಬಳಸಿಕೊಳ್ಳಲಾಗುತ್ತಿತ್ತು.
ಪಂದ್ಯದಲ್ಲಿ ಡಿಆರ್‌ಎಸ್‌ಅನ್ನು ಮತ್ತಷ್ಟು ನಿಖರಗೊಳಿಸಬೇಕು. ಇನ್ನಿಂಗ್ಸ್ ಒಂದರಲ್ಲಿ ಡಿಆರ್‌ಎಸ್‌ಅನ್ನು ಎರಡದಿಂದ ಮೂರಕ್ಕೆ ಏರಿಕೆ ಮಾಡಬೇಕು ಅಂತಲೂ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ನಾವು ಸೂಕ್ಷ್ಮ ಸನ್ನಿವೇಶದಲ್ಲಿ ಜೀವಿಸುತ್ತಿದ್ದೇವೆ. ಇಂದು ಶಿಫಾರಸು ಮಾಡಲಾಗಿರುವ ಮಧ್ಯಂತರ ಸಲಹೆಗಳು ಆಟಗಾರರನ್ನು ಮತ್ತಷ್ಟು ಸುರಕ್ಷಿತಗೊಳಿಸಲಿದೆ. ಆಟದ ವೇಳೆ ಪಾಲ್ಗೊಳ್ಳುವ ಪ್ರತಿಯೊಬ್ಬರ ರಕ್ಷಣೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಪಂದ್ಯದ ವೇಳೆ ಚೆಂಡಿಗೆ ಎಂಜಲು ಬಳಸುವುದರಿಂದ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಒಮ್ಮತದಿಂದ ಚೆಂಡಿಗೆ ಎಂಜಲು ಬಳಸುವುದನ್ನ ರದ್ದು ಮಾಡಬೇಕು ಎಂಬ ಶಿಫಾರಸು ಮಾಡಿದ್ದೇವೆ ಎಂದು ಐಸಿಸಿ ವೈದ್ಯಕೀಯ ಸಲಹಾ ಸಮಿತಿಯ ಅಧ್ಯಕ್ಷ ಡಾ. ಪೀಟರ್ ಹರ್ಕೋರ್ಟ್ ತಿಳಿಸಿದ್ದಾರೆ.