ಮುಂಬೈ: ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು. 28 ವರ್ಷಗಳ ವಿಶ್ವಕಪ್ ದಾಹ ಹಾಗು 21 ವರ್ಷ ಕ್ರಿಕೆಟ್ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದ ಸಚಿನ್ ತೆಂಡೂಲ್ಕರ್ ಕನಸು ಎಲ್ಲವೂ ಈ ಸಂದರ್ಭದಲ್ಲಿ ನನಸಾಗಿತ್ತು.
1983ರಲ್ಲಿ ಕಪಿಲ್‌ದೇವ್ ನೇತೃತ್ವದ ತಂಡ ವಿಶ್ವಕಪ್ ಗೆದ್ದಿದ್ದು ಬಿಟ್ಟರೆ 2003ರಲ್ಲಿ ಭಾರತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ 5 ವಿಶ್ವಕಪ್ ಆಡಿದ್ದ ಸಚಿನ್ಗೆ ವಿಶ್ವಕಪ್ ಕೈಗೆಟುಕದ ದ್ರಾಕ್ಷಿಯಾಗಿತ್ತು. 2011ರ ವಿಶ್ವಕಪ್ ಅವರಿಗೆ ಕೊನೆಯ ಅವಕಾಶವೂ ಆಗಿತ್ತು. ಅಂತೂ ಕೊನೆಗೂ ಭಾರತೀಯ ಕ್ರಿಕೆಟ್ ತಂಡ 'ಕ್ರಿಕೆಟ್ ದೇವರ' ಆಸೆ ಈಡೇರಿಸಿತ್ತು. ಗೆದ್ದು ಬೀಗಿದ ಸಂಭ್ರಮದಲ್ಲಿ ಇಡೀ ತಂಡ ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಹೆಗಲ ಮೇಲೆ ಹೊತ್ತು ಖುಷಿ ಪಟ್ಟಿತ್ತು.
ಓಪನ್ ನೆಟ್ಸ್ ವಿತ್ ಮಯಾಂಕ್ ಕಾರ್ಯಕ್ರಮದಲ್ಲಿ ಈ ಸ್ಮರಣೀಯ ಸಂದರ್ಭದ ಬಗ್ಗೆ ಕೊಹ್ಲಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕುತ್ತರಿಸಿದ ಕೊಹ್ಲಿ, ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ನಮ್ಮೆಲ್ಲರ ಚಿತ್ತ ಸಚಿನ್ ಪಾಜಿ ಅವರತ್ತ ಇತ್ತು. ಏಕೆಂದರೆ, ಅವರಿಗೆ ಕಪ್ ಎತ್ತಿ ಹಿಡಿಯಲು ಅದೊಂದೇ ಕೊನೆಯ ಅವಕಾಶವಾಗಿತ್ತು. ಅವರು ಭಾರತದ ಕ್ರಿಕೆಟ್ ಅನ್ನು 21 ವರ್ಷಗಳ ಕಾಲ ಹೊತ್ತು ನಡೆದಿದ್ದರು. ಅದಕ್ಕಾಗಿ ನಾವೆಲ್ಲರೂ ಅವರನ್ನು ಹೊತ್ತುಕೊಳ್ಳುವ ಸಮಯ ಒದಗಿಬಂದಿತ್ತು ಎಂದು ವಿವರಿಸಿದರು.
ಸಚಿನ್ ನಮಗೆ ಸಾಕಷ್ಟು ಪ್ರೇರಣೆಯಾಗಿದ್ದರು. ಭಾರತದ ಬಹುತೇಕ ಮಕ್ಕಳಿಗೆ ಅವರು ಇಂದಿಗೂ ಸ್ಫೂರ್ತಿಯ ಸೆಲೆ. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತ ಕ್ರೀಡಾಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ್ದಾರೆ ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿನ್ ತಂಡೂಲ್ಕರ್ 1992 , 1996, 1999, 2003, 2007 ಹಾಗೂ 2011ರ ವಿಶ್ವಕಪ್ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2003ರ ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ದೂರಿ ಪ್ರದರ್ಶನದೊಂದಿಗೆ ಫೈನಲ್ ತಲುಪಿತ್ತಾದ್ರೂ ಆಸ್ಟ್ರೇಲಿಯಾ ವಿರುದ್ಧ ಸೋಲುಕಂಡು ನಿರಾಶೆ ಅನುಭವಿಸಿತ್ತು. ಆದರೆ 2011ರಲ್ಲಿ ಅವರ ಕನಸನ್ನು ಭಾರತ ಯುವ ತಂಡ ನೆರವೇರಿಸಿತ್ತು. ಈ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯೂಸುಫ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಸಚಿನ್ರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಹೆಗಲ ಹೊತ್ತು ಮೆರವಣಿಗೆ ಮಾಡಿದ್ದರು. ಈ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ಸಚಿನ್ 2 ಶತಕಗಳ ಸಹಿತ 482 ರನ್ ಬಾರಿಸಿದ್ದರು.