ಮೊಹಾಲಿ: ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ಗಳಿಂದ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಅಫ್ರಿಕಾ 150 ರನ್ಗಳನ್ನು ಪೇರಿಸಿತ್ತು. ಈ ಸಾಧಾರಣ ಗುರಿಯನ್ನು ಭಾರತ ತಂಡ 19 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.
ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೆ ಧವನ್ ಹಾಗೂ ಕೊಹ್ಲಿ 61 ರನ್ಗಳ ಜೊತೆಯಾಟ ನೀಡಿ ತಂಡವನ್ನು ಸುಸ್ಥಿತಿಗೆ ತಂದರು. ಈ ಹಂತದಲ್ಲಿ ಧವನ್ ಶಂಸಿ ಬೌಲಿಂಗ್ನಲ್ಲಿ ಮಿಲ್ಲರ್ಗೆ ಕ್ಯಾಚ್ ನೀಡಿ ಔಟಾದರು. ಇವರ ನಂತರ ಬಂದ ಪಂತ್ ಕೇವಲ 5 ರನ್ಗಳಿಗೆ ವಿಕೆಟ್ ಒಪ್ಪಿಸಿ ಮತ್ತೆ ವೈಫಲ್ಯ ಅನುಭವಿಸಿದರು.
ಆದರೆ ಕೊಹ್ಲಿ ಮಾತ್ರ ಎಚ್ಚರಿಕೆಯ ಆಟವಾಡಿ ಗೆಲುವಿನ ದಡ ಸೇರಿಸಿದರು. 4ನೇ ವಿಕೆಟ್ ಜೊತೆಯಾಟದಲ್ಲಿ ಅಯ್ಯರ್ ಜೊತೆ 57 ರನ್ಗಳನ್ನು ಪೇರಿಸಿ ಗೆಲುವಿನ ದಡ ಸೇರಿಸಿದರು. ಕೊಹ್ಲಿ 52 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 72 ರನ್ ಗಳಿಸಿ ಔಟಾಗದೆ ಉಳಿದರು. ಶ್ರೇಯಸ್ ಅಯ್ಯರ್ 14 ಎಸೆತಗಳಲ್ಲಿ 16 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಶಂಸಿ, ಬಿಜಾರ್ನ್ ಫಾರ್ಚ್ಯುನ್ ಹಾಗೂ ಪೆಹ್ಲುಕ್ವಾಯೋ ತಲಾ ಒಂದು ವಿಕೆಟ್ ಪಡೆದರು. ಆಕರ್ಷಕ 72 ರನ್ ಬಾರಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಅಫ್ರಿಕಾ ಪರ ನಾಯಕ ಕ್ವಿಂಟನ್ ಡಿ ಕಾಕ್ 52, ಬುವಾಮ 49 ರನ್ ಗಳಿಸಿ 149 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.
ಭಾರತದ ಪರ ದೀಪಕ್ ಚಹಾರ್ 2, ಹಾರ್ದಿಕ್ ಪಾಂಡ್ಯ, ಸೈನಿ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.