ಮುಂಬೈ: ಭಾರತ ತಂಡದ ಪರ ಟೆಸ್ಟ್ ಕ್ರಿಕೆಟಿಗನಾಗಿ ತಂಡಕ್ಕೆ ಸೇರಿಕೊಂಡ ಕನ್ನಡಿಗ ಮಂಗಳೂರಿನ ಕೆ.ಎಲ್.ರಾಹುಲ್ ಇಂದು ಭಾರತ ತಂಡದ ಆಧಾರ ಸ್ಥಂಭವಾಗಿ ಬೆಳೆದು ನಿಂತಿದ್ದಾರೆ. ತಂಡಕ್ಕೆ ಅಗತ್ಯವಾದಾಗ ಯಾವುದೇ ಸವಾಲನ್ನು ಸ್ವೀಕರಿಸುತ್ತಿರುವ ಅವರು, ಒಂದೇ ತಿಂಗಳ ಅಂತರದಲ್ಲಿ ತಂಡದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟೆಸ್ಟ್ ತಂಡದಿಂದ ಹೊರ ಬಿದ್ದರೂ ಸೀಮಿತ ಓವರ್ಗಳಲ್ಲಿ ಸಿಕ್ಕ ಅವಕಾಶಗಳನ್ನು ಬಾಚಿಕೊಂಡ ರಾಹುಲ್ ಇದೀಗ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. 2020ರಲ್ಲಿ 3 ಸರಣಿಗಳಲ್ಲಿ ಪಾಲ್ಗೊಂಡಿರುವ ಅವರು, ಎಲ್ಲಾ ಸರಣಿಯಲ್ಲೂ ತಮ್ಮ ಪಾಲಿಗೆ ಬಂದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ನಾಯಕ ಹಾಗೂ ಕೋಚ್ಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
![KL Rahul](https://etvbharatimages.akamaized.net/etvbharat/prod-images/epci-dwuwam-2ik_0302newsroom_1580714715_933.jpg)
ಶ್ರೀಲಂಕಾ ವಿರುದ್ಧ ಆರಂಭಿಕ ಬ್ಯಾಟ್ಸ್ಮನ್
ಹೊಸ ವರ್ಷದ ಮೊದಲ ವಾರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೆ ರೋಹಿತ್ ಶರ್ಮಾ ವಿಶ್ರಾಂತಿ ತೆಗೆದುಕೊಂಡಿದ್ದರು. ಕಳೆದ ವರ್ಷ ವಿಂಡೀಸ್ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ರಾಹುಲ್ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅಲ್ಲದೆ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳಲ್ಲಿ 45, 54 ರನ್ ಗಳಿಸಿ ಮತ್ತೊಮ್ಮೆ ಮಿಂಚಿದರು. ಜೊತೆಗೆ ಆರಂಭಿಕ ಸ್ಥಾನದ ಬ್ಯಾಕ್ ಅಪ್ ಪ್ಲೇಯರ್ ಸ್ಥಾನವನ್ನು ಭದ್ರವಾಗಿಸಿಕೊಂಡರು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ
![KL Rahul success](https://etvbharatimages.akamaized.net/etvbharat/prod-images/epmsqh0u4aaqt3g_0302newsroom_1580714715_813.jpg)
ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿ ವೇಳೆ ಯುವ ವಿಕೆಟ್ ಕೀಪರ್ ಪಂತ್, ಪ್ಯಾಟ್ ಕಮ್ಮಿನ್ಸ್ ಬೌನ್ಸರ್ ಹೆಲ್ಮೆಟ್ಗೆ ಬಡಿದು ಗಾಯಗೊಂಡಿದ್ದರು. ಅಲ್ಲದೆ ಆ ಪಂದ್ಯದಲ್ಲಿ ರಾಹುಲ್ರನ್ನ 3ನೇ ಕ್ರಮಾಂಕದಲ್ಲಿ ಆಡಿಸಿ, ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದು ಟೀಕೆಗೆ ಗುರಿಯಾಗಿತ್ತು. ಆ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಸೋಲನುಭವಿಸಿತು. ಈ ಕಾರಣದಿಂದ ಕೊಹ್ಲಿ ಮತ್ತೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದರಿಂದ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತಾಯಿತು. ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಿದರು. ಮತ್ತೆ ಮೂರನೇ ಪಂದ್ಯದಲ್ಲಿ ಧವನ್ ಗಾಯಕ್ಕೆ ತುತ್ತಾಗಿದ್ದರಿಂದ ಆರಂಭಿಕ ಬ್ಯಾಟ್ಸ್ಮನ್ ಆಗಿ ಬಡ್ತಿ ಪಡೆದು, ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಿದರು. ಈ ಮೂಲಕ ಮತ್ತೆ ಒಂದೇ ಸರಣಿಯಲ್ಲಿ ಮೂರು ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಲ್ಲದೆ ವಿಕೆಟ್ ಕೀಪರ್ ಆಗಿಯೂ ಯಶಸ್ವಿ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
![KL Rahul success](https://etvbharatimages.akamaized.net/etvbharat/prod-images/epmsqh0u4aaqt3g_0302newsroom_1580714715_813.jpg)
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್, ಕೀಪರ್ ಹಾಗೂ ನಾಯಕ
ಕಿವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲೂ ಈ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದಲ್ಲದೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದರು. ಇನ್ನು ಕೊನೆಯ ಪಂದ್ಯದಲ್ಲಿ ನಾಯಕನಾಗಿದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ರಾಹುಲ್ ಫೀಲ್ಡಿಂಗ್ ವೇಳೆ ನಾಯಕನಾಗಿಯೂ ತಂಡವನ್ನು ಮುನ್ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸರಣಿಯಲ್ಲಿ ರಾಹುಲ್ 224 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
![KL Rahul success](https://etvbharatimages.akamaized.net/etvbharat/prod-images/epw1xktx0aahhci_0302newsroom_1580714715_704.jpg)
2014ರಲ್ಲಿ ಭಾರತ ಟೆಸ್ಟ್ ತಂಡದ ಪರ ಪದಾರ್ಪಣೆ ಮಾಡಿದ್ದ ರಾಹುಲ್ ಆರಂಭದಲ್ಲಿ ನಿಧಾನಗತಿ ಆಟಕ್ಕೆ ಒತ್ತು ಕೊಟ್ಟಿದ್ದರು. ಈ ವೇಳೆ ಹಲವಾರು ಕ್ರಿಕೆಟ್ ತಜ್ಞರು ಈತ ಟೆಸ್ಟ್ ಮೆಟೀರಿಯಲ್ ಎಂದು ಕರೆದಿದ್ದರು. ಆದರೆ 2016ರಲ್ಲಿ ಏಕದಿನ ಹಾಗೂ ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರೂ ಅವಕಾಶಗಳಿಂದ ವಂಚಿತರಾಗಿದ್ದರು. ಆದರೆ 2018ರ ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್, ನಂತರ ಸೀಮಿತ ಓವರ್ಗಳಲ್ಲಿ ತಂಡದ ಭಾಗವಾದರು. ಇದೀಗ ತಂಡಕ್ಕೆ ಆಧಾರವಾಗಿ ನಿಂತಿದ್ದಾರೆ.
![KL Rahul](https://etvbharatimages.akamaized.net/etvbharat/prod-images/epb_pluvaaamxdi_0302newsroom_1580714715_876.jpg)
27 ವರ್ಷದ ಕೆ.ಎಲ್.ರಾಹುಲ್ 36 ಟೆಸ್ಟ್ ಪಂದ್ಯ, 29 ಏಕದಿನ ಹಾಗೂ 41 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 2006, ಏಕದಿನ ಕ್ರಿಕೆಟ್ನಲ್ಲಿ 1035, ಟಿ-20ಯಲ್ಲಿ 1461 ರನ್ ಗಳಿಸಿದ್ದಾರೆ.