ಬೆಂಗಳೂರು: ಭಾರತ ಟೆಸ್ಟ್ ತಂಡದಿಂದ ಅವಕಾಶ ವಂಚಿತರಾಗಿರುವ ಕೆಎಲ್ ರಾಹುಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ವಿರುದ್ಧ ಆಕರ್ಷಕ ಶತಕ ಸಿಡಿಸಿ ಟೀಕಾಕಾರರಿಗೆ ಬ್ಯಾಟ್ನಿಂದಲೇ ಉತ್ತರಿಸಿದ್ದಾರೆ.
ಕೇರಳ ವಿರುದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಪಿಯ ಲೀಗ್ ಪಂದ್ಯದಲ್ಲಿ ಕೇರಳ ವಿರುದ್ಧ ರಾಹುಲ್ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ರಾಹುಲ್ಗೆ ಕೊಕ್ ನೀಡಿದ ಬಿಸಿಸಿಐ ಆಯ್ಕೆ ಸಮಿತಿ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾಮರ್ಥ್ಯವನ್ನ ಸಾಬೀತು ಪಡಿಸಿದರೆ ಮತ್ತೆ ರಾಷ್ಟ್ರೀಯ ತಂಡದ ಬಾಗಿಲು ರಾಹುಲ್ಗಾಗಿ ಸದಾ ತೆರೆದಿರುತ್ತದೆ ಎಂದು ಸಲಹೆ ನೀಡಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿರುವ ರಾಹುಲ್ ಸರಣಿ ಆರಂಭದಲ್ಲೇ ಶತಕದ ಮೂಲಕ ತಮ್ಮ ತಾಕತ್ತನ್ನು ಸಾಬೀತುಪಡಿಸಿದ್ದಾರೆ.
108 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ ಒಟ್ಟಾರೆ 122 ಎಸೆತಗಳಲ್ಲಿ 131 ರನ್ಗಳಿಸುವ ಮೂಲಕ ಕಳಪೆ ಫಾರ್ಮ್ನಿಂದ ಹೊರ ಬಂದಿದ್ದಾರೆ. ಇವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸೇರಿತ್ತು. ರಾಹುಲ್ಗೆ ಸಾಥ್ ನೀಡಿದ ಭಾರತ ತಂಡ ಸೇರಲು ಹಾತೊರೆಯುತ್ತಿರುವ ನಾಯಕ ಮನೀಷ್ ಪಾಂಡೆ(51) ಕೂಡ ಟೂರ್ನಿಯಲ್ಲಿ ಸತತ 2ನೇ ಅರ್ಧಶತಕ ದಾಖಲಿಸಿದರು.
ಇವರಿಬ್ಬರ ಆಟದ ನೆರವಿನಿಂದ ಕರ್ನಾಟಕ ತಂಡ ಕೇರಳ ತಂಡಕ್ಕೆ 295 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.