ಮುಂಬೈ: ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಅಮೆರಿಕ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಭಾರತ ತಂಡದ ಪರ 49 ಟೆಸ್ಟ್ ಹಾಗೂ 94 ಏಕದಿನ ಪಂದ್ಯಗಳನ್ನಾಡಿರುವ ಕಿರಣ್ ಮೋರೆ ಯುಎಸ್‌ಎ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಈ ಹಿಂದೆ ಕೋಚ್ ಆಗಿದ್ದ ಶ್ರೀಲಂಕಾದ ಮಾಜಿ ಆಟಗಾರ ಪುಬುಡು ದಸ್ಸನಾಯಕೆ ಅವರ ಗುತ್ತಿಗೆ ಮಾರ್ಚ್ 2019ರಲ್ಲಿ ಕೊನೆಗೊಂಡಿತ್ತು. ಆದರೆ ಡಿಸೆಂಬರ್ವರಗೂ ಮುಂದೂಡಲಾಗಿದ್ದರಿಂದ ಅವರೇ ಮುಂದುವರೆದಿದ್ದರು. ಆದರೆ ಯುಎಸ್‌ಎ ಕ್ರಿಕೆಟ್ ಮಂಡಳಿ ಹಾಗೂ ದಸ್ಸೆನಾಯಕೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಮೋರೆ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಲಾಗಿದೆ.
ಮೋರೆ ಈ ಹಿಂದೆ ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪಿಂಗ್ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದಾರೆ.
ಮೋರೆ ಜೊತೆಗೆ ಭಾರತ ತಂಡದ ಮಾಜಿ ಸಿನ್ನರ್ ಹಾಗೂ ಕನ್ನಡಿಗ ಸುನಿಲ್ ಜೋಶಿ ಅವರನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ, ಭಾರತ ತಂಡದ ಮಾಜಿ ಆಟಗಾರ ಪ್ರವೀಣ್ ಆಮ್ರೆ ಮತ್ತು ವೆಸ್ಟ್ ಇಂಡೀಸ್‌ನ ಕೀರನ್ ಪೋವೆಲ್ ಅವರನ್ನು ಬ್ಯಾಟಿಂಗ್ ಕೋಚ್‌ಗಳಾಗಿಯೂ ಯುಎಸ್‌ಎ ಕ್ರಿಕೆಟ್ ಬೋರ್ಡ್ ನೇಮಕ ಮಾಡಿದೆ.