ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೇಸಿಂಗ್ ವೇಳೆ ರಾಯುಡು ರನ್ಗಾಗಿ ಓಡುವ ಬದಲು ಜಾಗಿಂಗ್ ಮಾಡುತ್ತಿದ್ದರು ಎಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಕಿಡಿ ಕಾಡಿದ್ದಾರೆ.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ನಾಯಕ ಕೊಹ್ಲಿ ಅವರ 90 ರನ್ಗಳ ನೆರವಿನಿಂದ 169 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಸಿಎಸ್ಕೆ ಕೇವಲ 132 ರನ್ಗಳಿಸಲಷ್ಟೇ ಶಕ್ತವಾಗಿ 37 ರನ್ಗಳ ಸೋಲು ಕಂಡಿತು. 3ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ಅಂಬಾಟಿ ರಾಯುಡು 40 ಎಸೆತಗಳಲ್ಲಿ 42 ರನ್ಗಳಿಸಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ ಕೇವಲ 4 ಬೌಂಡರಿ ಮಾತ್ರ ಸಿಡಿದಿದ್ದವು.
ರಾಯಡು ಅವರ ನಿಧಾನಗತಿ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಕೆಪಿ, ಬೇಗ ಮೊದಲ ರನ್ ಓಡಿ ನಂತರ ಎರಡನೇ ರನ್ ಕದಿಯುವ ಉತ್ಸಾಹ, ಚುರುಕುತನ ಎಲ್ಲಾ ಆಟಗಾರರಲ್ಲೂ ಕಾಣಬಹುದು. ಆದರೆ, ರಾಯುಡು ಮೊದಲ ರನ್ನಲ್ಲೇ ವೇಗವಾಗಿ ತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ಡಬಲ್ಸ್ ಬರುತ್ತಿಲ್ಲ. ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಡುಪ್ಲೆಸಿಸ್, ವಾರ್ನರ್, ಬೈರ್‌ಸ್ಟೋವ್ ಅಂತಹ ಆಟಗಾರರನ್ನು ನೋಡಿ ರನ್ ಕದಿಯುವುದನ್ನು ಕಲಿಯಬೇಕಿದೆ ಎಂದು ರಾಯುಡುಗೆ ಸಲಹೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ವೇಗವಾಗಿ ಓಡುವ ಧೋನಿ ಅಂತಹ ಆಟಗಾರ ಇರುವಾಗ ರಾಯುಡು ಮಾತ್ರ ಈ ರೀತಿ ನಿಧಾನಗತಿ ರನ್ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
"ನೀವು ಯಾರು, ಏನು ಎಂಬುದರ ಬಗ್ಗೆ ಅಗತ್ಯವಿಲ್ಲ, ಮೈದಾನದಲ್ಲಿ ಆಡುವಾಗ ಶೇ 100 ರಷ್ಟು ಪರಿಶ್ರಮ ನೀಡುವುದು ಅಗತ್ಯ. ಇದರಿಂದ ಇತರೆ ಆಟಗಾರರಿಗೂ ಸ್ಪೂರ್ತಿಯಾಗುತ್ತೀರಿ, ಅದರೆ ರನ್ ಚೇಸ್ ಮಾಡುವಾಗ ಇಂಥ ಸೋಮಾರಿಯಾಟವನ್ನು ಸಹಿಸಲು ಸಾಧ್ಯವಿಲ್ಲ, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಗುಣಮಟ್ಟವನ್ನು ತಗ್ಗಿಸುತ್ತದೆ. ಇತರೆ ಆಟಗಾರರನ್ನು ನೋಡಿ ಕಲಿಯುವುದು ಬಹಳಷ್ಟಿದೆ" ಎಂದು ಕೆವಿನ್ ಹೇಳಿದ್ದಾರೆ.
ಯುವ ಆಟಗಾರ ಜಗದೀಶನ್, ರಾಯುಡು ಜೊತೆ ಆಡುವಾಗ ಮೊದಲ ರನ್ ಪೂರ್ಣಗೊಳಿಸಿ ಎರಡನೇ ಓಟಕ್ಕೆ ಸಿದ್ಧರಾಗುತ್ತಿದ್ದರೆ, ರಾಯುಡು ಇನ್ನೂ ಒಂದು ರನ್ ಪೂರ್ಣಗೊಳಿಸದೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಆದರೆ ಜಗದೀಶನ್ ಕೂಡಾ ಸಿಂಗಲ್ ತೆಗೆದುಕೊಳ್ಳುವಾಗ ನಿಧಾನ ಮಾಡಿದ್ದರಿಂದ ಮೋರಿಸ್ ಅವರ ಗುಡ್ ಥ್ರೋಗೆ ರನ್ಔಟ್ ಆಗಿದ್ದರು.