ಮುಂಬೈ: ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಅಪವಾದ ಹೊತ್ತು, 7 ವರ್ಷ ನಿಷೇಧಕ್ಕೊಳಗಾಗಿದ್ದ ಭಾರತ ತಂಡದ ಮಾಜಿ ವೇಗಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ.
ಕೇರಳ ಮತ್ತು ಪುದುಚೇರಿ ವಿರುದ್ಧ ನಡೆದ ಪಂದ್ಯ ಶ್ರೀಶಾಂತ್ ಪುನರಾಗಮನಕ್ಕೆ ವೇದಿಕೆಯಾಯಿತು. ವಿಶೇಷವೆಂದರೆ ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್ನಲ್ಲೇ ವಿಕೆಟ್ ಪಡೆದು ಮಿಂಚಿದರು. ಪುದುಚೇರಿಯ ಆರಂಭಿಕ ಬ್ಯಾಟ್ಸ್ಮನ್ ಫಾಬಿದ್ ಅಹ್ಮದ್ರನ್ನು ಬೌಲ್ಡ್ ಮೂಲಕ ಶ್ರೀಶಾಂತ್ ಕ್ರಿಕೆಟ್ ಜೀವನ ಎರಡನೇ ಇನ್ನಿಂಗ್ಸ್ ಅನ್ನು ಸ್ಮರಣೀಯವಾಗಿಸಿಕೊಂಡರು. ಈ ಪಂದ್ಯದಲ್ಲಿ ಶ್ರೀಶಾಂತ್ 4 ಓವರ್ ಎಸೆದು 29 ರನ್ ನೀಡಿ ಒಂದು ವಿಕೆಟ್ ಪಡೆದರು.
ಸಂಜು ಸಾಮ್ಸನ್ ನೇತೃತ್ವದ ಕೇರಳ ತಂಡ ಪುದಚೇರಿಯನ್ನು 20 ಓವರ್ಗಳಲ್ಲಿ 137ಕ್ಕೆ ನಿಯಂತ್ರಿಸಿತ್ತು. ಜಲಜ್ ಸಕ್ಸೇನಾ 3 ವಿಕೆಟ್ ಪಡೆದರೆ,ಶ್ರೀಶಾಂತ್ ಮತ್ತು ಆಸಿಫ್ ತಲಾ ಒಂದು ವಿಕೆಟ್ ಪಡೆದಿದ್ದರು.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಕೇರಳ ತಂಡ 18.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಟೂರ್ನಿಯನ್ನ ಶುಭಾರಂಭ ಮಾಡಿತು.
ರಾಬಿನ್ ಉತ್ತಪ್ಪ 21, ಮೊಹಮ್ಮದ್ ಅಜರುದ್ದೀನ್ 30, ಸಂಜು ಸಾಮ್ಸನ್ 32, ಸಚಿನ್ ಬೇಬಿ 18, ವಿಷ್ಣ ವಿನೋದ್ ಅಜೇಯ 11, ಸಲ್ಮಾನ್ ನಜೀರ್ ಅಜೇಯ 20 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.