ನ್ಯೂಯಾರ್ಕ್: ಕ್ರಿಕೆಟ್ ಜಗತ್ತಿಗೆ ಅಂಬೆಗಾಲಿಡುತ್ತಿರುವ ಯುನೈಟೆಡ್ ಸ್ಟೇಟ್ಸ್ ಅಮೆರಿಕ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ ಜೆ. ಅರುಣ್ ಕುಮಾರ್ ನೇಮಕಗೊಂಡಿದ್ದಾರೆ.
ಕರ್ನಾಟಕದ ಪರ ಒಬ್ಬ ಆಟಗಾರನಾಗಿ ಕೆಲವು ವರ್ಷಗಳ ಕಾಲ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅರುಣ್ ಕುಮಾರ್ ಯುಎಸ್ಎ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ವಿಚಾರವನ್ನು ಅಮೆರಿಕ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಕ್ರಿಕೆಟ್ಗೆ ಹೆಚ್ಚಿನ ಜನಪ್ರಿಯತೆ ಇಲ್ಲದ ಕಾರಣ ಇನ್ನು ಪ್ರಸಿದ್ದವಾಗಿಲ್ಲ. ಇದೀಗ ಕೋಚ್ ಅರುಣ್ ಕುಮಾರ್ಗೆ ಯುಎಸ್ಎ ತಂಡವನ್ನು ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿನತ್ತ ಕೊಂಡೊಯ್ಯುವ ಜವಾಬ್ದಾರಿ ಸಿಕ್ಕಿದೆ.
ಅರುಣ್ ಕುಮಾರ್ ಗರಡಿಯಲ್ಲಿ 2013-14 ಮತ್ತು 2014-15ರ ರಣಜಿ ಆವೃತ್ತಿಯಲ್ಲಿ ಕರ್ನಾಟಕ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇನ್ನು ರಣಜಿಯಲ್ಲಿ ಪುದುಚೇರಿ, ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಅರುಣ್ ಕುಮಾರ್ 109 ಪ್ರಥಮ ದರ್ಜೆ ಪಂದ್ಯಗಳಿಂದ 7208 ರನ್, 100 ಲಿಸ್ಟ್ ಎ ಪಂದ್ಯಗಳನ್ನು 3227 ರನ್ಗಳಿಸಿದ್ದಾರೆ.