ನವದೆಹಲಿ: ಎದೆ ನೋವಿನ ಕಾರಣ ದೆಹಲಿಯ ಪೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದೆ.
ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಡಾ, ಅತುಲ್ ಮಾಥೂರ್ ಹಾಗೂ ತಂಡದಿಂದ ಮಾಹಿತಿ ಹೊರಬಿದ್ದಿದೆ. ಕಪಿಲ್ ಆರೋಗ್ಯದಲ್ಲಿ ಸ್ಥಿರತೆ ಇದ್ದು, ಮುಂದಿನ ಕೆಲ ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಪ್ರಕಟಣೆ ಸಹ ಹೊರಡಿಸಿದ್ದು, ಕಪಿಲ್ ದೇವ್ ಅವರಿಗೆ ಅಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ತಿಳಿಸಿದೆ.
ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ದೇವ್ಗೆ ಹೃದಯಾಘಾತ: ಮುಂದುವರಿದ ಚಿಕಿತ್ಸೆ
ಮಧ್ಯರಾತ್ರಿ 1ಗಂಟೆಗೆ ಎದೆನೋವಿನ ಸಮಸ್ಯೆಯಿಂದ ಅವರು ಆಸ್ಪತ್ರೆಗೆ ಬಂದಿದ್ದು, ತಕ್ಷಣವೇ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಹೃದಯ ಬಡಿತ ಹಾಗೂ ರಕ್ತದ ಹರಿಯುವಿಕೆ ಇದೀಗ ನಾರ್ಮಲ್ ಆಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಐಸಿಎ(ಇಂಡಿಯನ್ ಕ್ರಿಕೆಟ್ ಅಸೋಷಿಯೇಷನ್) ಅಧ್ಯಕ್ಷ ಅಶೋಕ್ ಮಲ್ಹೋತ್ರಾ, ಕಪಿಲ್ ಆರೋಗ್ಯದಲ್ಲಿ ಸ್ಥಿರತೆ ಇದೆ ಎಂದಿದ್ದಾರೆ. ಅವರ ಆರೋಗ್ಯದ ಬಗ್ಗೆ ಕಪಿಲ್ ಪತ್ನಿ ಜತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನಾಡಿರುವ ಕಪಿಲ್ 434 ವಿಕೆಟ್ ಪಡೆದುಕೊಂಡಿದ್ದು, 5,248 ರನ್ಗಳಿಕೆ ಮಾಡಿದ್ದಾರೆ. ಜತೆಗೆ 225 ಏಕದಿನ ಪಂದ್ಯಗಳಿಂದ 253 ವಿಕೆಟ್ ಹಾಗೂ 3,783 ರನ್ ಬಾರಿಸಿದ್ದಾರೆ. 2010ರಲ್ಲಿ ಐಸಿಸಿಯಿಂದ ಹಾಲ್ ಆಫ್ ಫೇಮ್ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ವಿಶೇಷವೆಂದರೆ 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಜಯಿಸಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ.