ಮುಂಬೈ: ಭಾರತದ ಸಿನೀಯರ್ ಪುರುಷರ ತಂಡದ ಕೋಚ್ ಹುದ್ದೆಗಾಗಿ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನ ಮಾಡಿದ್ದು, ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯಗೊಳ್ಳುತ್ತಿದ್ದಂತೆ ಹೊಸ ಕೋಚ್ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.
ಇದರ ಮಧ್ಯೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಮ್ ಇಂಡಿಯಾದ ಸಲಹಾ ಸಮಿತಿಗೆ ಭಾರತದ ಮಾಜಿ ಆಟಗಾರ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳಲ್ಲಿ ಈ ನಿರ್ಧಾರ ಹೊರಬೀಳಲಿದ್ದು, ಒಂದು ವೇಳೆ ಅವರು ಮುಖ್ಯಸ್ಥರಾಗಿ ಆಯ್ಕೆಯಾದರೆ ನೂತನ ಕೋಚ್ ಅನ್ನು ಅವರೇ ಆಯ್ಕೆ ಮಾಡಲಿದ್ದಾರೆ.
ಪ್ರಸ್ತುತ ಈ ಸಲಹಾ ಸಮಿತಿಯಲ್ಲಿ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸದಸ್ಯರಾಗಿದ್ದು, ಈ ಸಮಿತಿ ಕಪಿಲ್ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ಈಗಾಗಲೇ ತೀರ್ಮಾಣ ಕೈಗೊಳ್ಳಲಾಗಿದೆ. ಒಂದು ವೇಳೆ ಕಪಿಲ್ ದೇವ್ ಕೋಚ್ ನೇಮಕ ಮಾಡುವ ಜವಾಬ್ದಾರಿ ಹೊತ್ತುಕೊಂಡರೆ ರವಿಶಾಸ್ತ್ರಿಗೆ ಕೊಕ್ ನೀಡಬಹುದು ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ನಿರ್ವಾಹಕರ ಸಮಿತಿಯ ಪ್ರಕಾರ ಕಪಿಲ್ ದೇವ್, ಅನ್ಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ನೇತೃತ್ವದ ಸಮಿತಿ ಹೊಸ ಕೋಚ್ ಆಯ್ಕೆ ಮಾಡಲಿ ಎಂಬುದು ಅವರ ಆಶಯವಾಗಿದೆ. ಉಳಿದಂತೆ ಬಿಸಿಸಿಐ ಸಿಇಓ ರಾಹುಲ್ ಜೋಹ್ರಾ ಸಹ ಸಿಬ್ಬಂದಿ ಆಯ್ಕೆ ಮಾಡಲಿ ಎಂಬುದು ಇವರ ವಾದವಾಗಿದೆ.