ಮುಂಬೈ: ಅಂಡರ್ 19 ವಿಶ್ವಕಪ್ ವೇಳೆ ಭಾರತ ತಂಡದ ಆಟಗಾರರು ಬಾಂಗ್ಲಾದೇಶದ ಆಟಗಾರರ ಜೊತೆ ಜಗಳವಾಡಿ ಅಸಭ್ಯ ವರ್ತನೆ ತೋರಿದ್ದಕ್ಕೆ ಟೀಂ ಇಂಡಿಯಾದ ಮಾಜಿ ನಾಯಕರಾದ ಕಪಿಲ್ ದೇವ್ ಹಾಗೂ ಮೊಹಮ್ಮದ್ ಅಜರುದ್ಧೀನ್ ಆಕ್ಷೇಪಿಸಿದ್ದಾರೆ.
ಬಾಂಗ್ಲಾ ವಿರುದ್ಧದ ಅಂಡರ್ 19 ವಿಶ್ವಕಪ್ ಫೈನಲ್ ವೇಳೆ 2 ತಂಡದ ಆಟಗಾರರು ಅಗತ್ಯಕ್ಕಿಂತ ಮೀರಿದ ಕೋಪವನ್ನು ಪಂದ್ಯದ ವೇಳೆ ತೋರಿದ್ದರು. ಪಂದ್ಯ ಮುಗಿದ ನಂತರ ಎರಡೂ ತಂಡದ ಕೆಲ ಆಟಗಾರರು ಮಾತಿಗೆ ಮಾತು ಬೆಳೆಸಿದ್ದಲ್ಲದೆ, ಕೆಲವರು ಮೈದಾನದಲ್ಲೇ ತಳ್ಳುವ ಮೂಲಕ ಅಸಭ್ಯತೆ ತೋರಿದ್ದರು.
"ಕ್ರಿಕೆಟ್ ಎದುರಾಳಿಗಳನ್ನು ಹಿಯಾಳಿಸುವಂತಹದ್ದಲ್ಲ. ಹೀಗಾಗಿ ವಿಶ್ವಕಪ್ ಫೈನಲ್ ವೇಳೆ ಅಶಿಸ್ತು ಪ್ರದರ್ಶನ ತೋರಿದ ಆಟಗಾರರ ವಿರುದ್ಧ ಬಿಸಿಸಿಐ ಕ್ರಮ ತೆಗೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಬಿಸಿಸಿಐ ಈ ಯುವಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಕಾರಣಗಳಿವೆ ಎಂದು ಭಾವಿಸಿದ್ದೇನೆ" ಎಂದು ಕಪಿಲ್ ದೇವ್ ಹೇಳಿದ್ದಾರೆ.
ನಾನು ಆಕ್ರಮಣಶೀಲತೆಯನ್ನು ಸ್ವಾಗತಿಸುತ್ತೇನೆ, ಅದರಲ್ಲಿ ತಪ್ಪೇನಿಲ್ಲ. ಆದರೆ, ಇದು ನಿಯಂತ್ರಣದಲ್ಲಿರಬೇಕು. ನೀವು ಸ್ಪರ್ಧೆಯ ಹೆಸರಿನಲ್ಲಿ ಸಭ್ಯತೆ ಮೀರಿ ವರ್ತಿಸಬಾರದು. ಮೈದಾನದಲ್ಲಿ ಯುವಕರು ಇಂತಹ ಅಸಹ್ಯಕರ ರೀತಿ ವರ್ತಿಸಿರುವುದು ಸ್ವೀಕಾರ ಅರ್ಹವಲ್ಲ ಎಂದಿದ್ದಾರೆ.
ಕಪಿಲ್ ದೇವ್ ಮಾತಿಗೆ ಧ್ವನಿಗೂಡಿಸಿರುವ ಅಜರುದ್ಧೀನ್ ಸಹಾ ಮೈದಾನದಲ್ಲಿ ಜಗಳವಾಡಿದ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳತ್ತೇನೆ. ಆದರೆ, ತಂಡದ ಸಿಬ್ಬಂದಿ ಯುವ ಆಟಗಾರರಿಗೆ ಶಿಸ್ತನ್ನು ಹೇಳಿಕೊಡಬೇಕು. ಆದರೆ, ಈಗ ತುಂಬಾ ವಿಳಂಬವಾಗಿದೆ. ಆಟಗಾರರು ಯಾವಾಗಲೂ ಶಿಸ್ತಿನಿಂದ ಇರಬೇಕು ಎಂದಿದ್ದಾರೆ.
ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಸಹಾ ಪ್ರಿಯಮ್ ಗರ್ಗ್ ನೇತೃತ್ವದ ತಂಡದ ನಡೆ ಅಸಹ್ಯಕರ ಮತ್ತು ನಾಚಿಕೆಗೇಡು ಎಂದು ಟೀಕಿಸಿದ್ದರು.