ಆಕ್ಲೆಂಡ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ವರ್ಷದ ಏಕದಿನ ಆಟಗಾರ ಎಂದು ಘೋಷಿಸಲಾಗಿದೆ. ಈ ವರ್ಷದ ನ್ಯೂಜಿಲ್ಯಾಂಡ್ ಕ್ರಿಕೆಟ್ ಪ್ರಶಸ್ತಿಗಳಲ್ಲಿ ಪುರುಷರ ವಿಭಾಗದಲ್ಲಿ ವಿಲಿಯಮ್ಸನ್ಗೆ ಈ ಪ್ರಶಸ್ತಿ ನೀಡಲಾಗಿದೆ.
ಮೂರೂ ಮಾದರಿಯ ಕ್ರಿಕೆಟ್ಗಳಲ್ಲಿ ನ್ಯೂಜಿಲ್ಯಾಂಡ್ ತಂಡದ ನಾಯಕರಾಗಿರುವ ಕೇನ್ ವಿಲಿಯಮ್ಸನ್ ಅವರ ಅದ್ಭುತ ಪ್ರದರ್ಶನಕ್ಕೆ ಈ ಗೌರವ ಸಲ್ಲಿಸಲಾಗಿದೆ. ವೈಯಕ್ತಿಕವಾಗಿ ಉತ್ತಮ ಆಟ ಮತ್ತು ನ್ಯೂಜಿಲೆಂಡ್ ತಂಡವನ್ನು ಭಾರಿ ಯಶಸ್ಸಿನೊಂದಿಗೆ ಮುನ್ನಡೆಸಿದ್ದ ವಿಲಿಯಮ್ಸನ್, ಕಳೆದ ವಿಶ್ವಕಪ್ನಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು.
29ರ ಹರೆಯದ ವಿಲಿಯಮ್ಸನ್, ವಿಶ್ವಕಪ್ನಲ್ಲಿ ಎರಡು ಶತಕಗಳನ್ನು ಒಳಗೊಂಡಂತೆ 82ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 578 ರನ್ ಗಳಿಸಿದ್ದಾರೆ. ಈ ಅಮೋಘ ಪ್ರದರ್ಶನದಿಂದಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ರಾಸ್ ಟೇಲರ್ ಹಾಗೂ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ರಿಗೆ ಟಿ20 ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಲಾಗಿದೆ. ಬ್ಯಾಟಿಂಗ್‌ನಲ್ಲಿನ ಅದ್ಭುತ ಸ್ಥಿರತೆ ಕಾಪಾಡಿಕೊಂಡು ಬಂದ ಸುಝಿ ಬೇಟ್ಸ್ ಅವರಿಗೆ ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿ ನೀಡಲಾಯಿತು.
ಕೊರೊನಾದಿಂದಾಗಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ಆನ್‌ಲೈನ್‌ನಲ್ಲಿ ನೀಡಲಾಯಿತು.