ಅಬುಧಾಬಿ : ಜಾರ್ಖಂಡ್ ತಂಡದ ಅನುಭವಿ ಬ್ಯಾಟ್ಸ್ಮನ್ ಸೌರಭ್ ತಿವಾರಿ ಮೂರು ವರ್ಷಗಳ ಬಳಿಕ ಐಪಿಎಲ್ ಪಂದ್ಯದ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಪರ ನಾಲ್ಕನೇ ಕ್ರಮಾಂಕಕ್ಕೆ ಆಡಲಿದ್ದಾರೆ.
ಕೊಹ್ಲಿ ನೇತೃತ್ವದಲ್ಲಿ 2008ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ತಿವಾರಿ ಐಪಿಎಲ್ನಲ್ಲಿ 82 ಪಂದ್ಯಗಳನ್ನಾಡಿದ್ದು 7 ಅರ್ಧಶತಕಗಳ ಸಹಿತ 1276 ರನ್ ಸಿಡಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 61. 2010ರಲ್ಲಿ 16 ಪಂದ್ಯಗಳಿಂದ 419 ರನ್ ಸಿಡಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದ ತಿವಾರಿ ನಂತರ ದಿನಗಳಲ್ಲಿ ದಯನೀಯ ವೈಫಲ್ಯ ಅನುಭವಿಸಿದರು.
2008ರಿಂದ 2010ರವರೆಗ ಮುಂಬೈ ಇಂಡಿಯನ್ಸ್ನಲ್ಲಿದ್ದ ತಿವಾರಿ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಕಾಶ ಪಡೆದರು. ನಂತರ ಡೆಲ್ಲಿ, ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ಹಾಗೂ 2017ರಿಂದ ಮರಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದರು.
2017ರಲ್ಲಿ ತನ್ನ ಏಕೈಕ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಿದ್ದರು. ಅಂದು 43 ಎಸೆತಗಳಲ್ಲಿ 52 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದು ಟೂರ್ನಿಯ 54ನೇ ಪಂದ್ಯವಾಗಿತ್ತು. ನಂತರ ಮುಂಬೈ ತಂಡದಲ್ಲೇ ಇದ್ದರೂ 2018 ಮತ್ತು 2019ರಲ್ಲಿ ಒಂದೂ ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಇದೀಗ 13ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಬಲಿಷ್ಠ ಸಿಎಸ್ಕೆ ವಿರುದ್ಧ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ದಾರೆ.