ಅಗರ್ತಲಾ(ತ್ರಿಪುರ): ರಣಜಿ ಟ್ರೋಫಿ ಇತಿಹಾಸದಲ್ಲಿ ಫಾಲೋಆನ್ಗೆ ತುತ್ತಾದರೂ ಪಂದ್ಯ ಗೆಲ್ಲುವ ಮೂಲಕ ಜಾರ್ಖಂಡ್ ತಂಡ ದಾಖಲೆ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ತ್ರಿಪುರ 289 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತ ಹಿಂಬಾಲಿಸಿದ ಜಾರ್ಖಂಡ್ ತಂಡ 136 ರನ್ಗಳಿಗೆ ಆಲೌಟ್ ಆಗಿದ್ದರಿಂದ ತ್ರಿಪುರ ನಾಯಕ ಫಾಲೋ ಆನ್ ಹೇರಿದ್ರು.
153 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ ಜಾರ್ಖಂಡ್ ಸೌರಭ್ ತಿವಾರಿ (122) ಹಾಗೂ ಇಶಾಂಕ್ ಜಗ್ಗಿ(107) ಶತಕಗಳ ನೆರವಿನಿಂದ 418 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಘೋಷಿಸಿಕೊಂಡು ತ್ರಿಪುರಕ್ಕೆ 266 ರನ್ಗಳ ಗುರಿ ನೀಡಿತು.
ಇತ್ತ ಗೆಲ್ಲಬಹುದಾದ ಪಂದ್ಯವನ್ನು ಫಾಲೋಆನ್ ಹೇರುವ ಮೂಲಕ ಪಜೀತಿಗೆ ಸಿಲುಕಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ತ್ರಿಪುರ ತಂಡ ಜಾರ್ಖಂಡ್ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾರದೇ 211 ರನ್ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ತಂಡ 54 ರನ್ಗಳ ಅನಿರೀಕ್ಷಿತ ಸೋಲು ಅನುಭವಿಸಿದೆ. ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಮಣಿಶಂಕರ್ ಮುರಾಸಿಂಗ್(103) ಶತಕ ಕೂಡ ವ್ಯರ್ಥವಾಯಿತು.
ಜಾರ್ಖಂಡ್ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ಆಶಿಷ್ ಕುಮಾರ್ 5 ವಿಕೆಟ್ ಪಡೆದರೆ, ವಿವೇಕಾನಂದ್ ತಿವಾರಿ 3 ಹಾಗೂ ಅಜಯ್ ಯಾದವ್ 2 ವಿಕೆಟ್ ಪಡೆದು ಐತಿಹಾಸಿಕ ಜಯ ತಂದುಕೊಟ್ಟರು.
ವಿವಿಎಸ್ ಲಕ್ಷ್ಮಣ್-ದ್ರಾವಿಡ್ ಆಟ ನೆನಪಿಸಿದ ತಿವಾರಿ-ಜಗ್ಗಿ:
2001 ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಕೂಡ ಫಾಲೋಆನ್ಗೆ ಒಳಗಾಗಿಯೂ 171 ರನ್ಗಳ ಜಯ ಸಾಧಿಸಿತ್ತು. ಅಂದು ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ 445 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 171 ರನ್ಗಳಿಗೆ ಆಲ್ಔಟ್ ಆಗಿತ್ತು. ಆಸೀಸ್ ಭಾರತದ ಮೇಲೆ ಫಾಲೋ ಆನ್ ಹೇರಿದ ಇನ್ನಿಂಗ್ಸ್ ಜಯದ ಕನಸು ಕಂಡಿತ್ತು.
ಆದರೆ ಭಾರತ ಕಂಡ ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಾದ ವಿವಿಎಸ್ ಲಕ್ಷ್ಮಣ್ 281 ಹಾಗೂ ರಾಹುಲ್ ದ್ರಾವಿಡ್ 180 ರನ್ಗಳಿಸಿ ಆಂಗ್ಲರಿಗೆ ಶಾಕ್ ನೀಡಿದ್ದರು. ಒಟ್ಟಾರೆ 657 ರನ್ ಸಿಡಿಸಿ ಡಿಕ್ಲೇರ್ ಘೋಷಿಸಿಕೊಂಡ ಗಂಗೂಲಿ ಪಡೆ ಆಂಗ್ಲರನ್ನು 171 ರನ್ಗಳಿಂದ ಬಗ್ಗುಬಡಿದಿತ್ತು.