ಮ್ಯಾಂಚೆಸ್ಟರ್: ಟೀಂ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ತಂಡದಲ್ಲಿದ್ದರೆ ಸಾಕು, ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಲ್ಲಿ ನಡುಕ ಶುರುವಾಗಿ ಬಿಡುತ್ತದೆ. ಇಂದಿನ ಪಂದ್ಯದಲ್ಲೂ ಅಂತಹ ಘಟನೆಯೊಂದು ನಡೆದಿದೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಕಿವೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಆರಂಭಿಕರಾಗಿ ಬ್ಯಾಟ್ ಮಾಡಲು ಕಣಕ್ಕಿಳಿದಿದ್ದ ಹೆನ್ರಿ ನಿಕೋಲ್ಸ್ ಹಾಗೂ ಮಾರ್ಟಿನ್ ಗಪ್ಟಿಲ್ಗೆ ಟೀಂ ಇಂಡಿಯಾ ಬೌಲರ್‌ಗಳು ಮಾರಕವಾಗಿ ಕಾಡಿದರು.
ಪ್ರಮುಖವಾಗಿ ಟೀಂ ಇಂಡಿಯಾದ ಬುಮ್ರಾ ಆರಂಭದಲ್ಲಿ ತಾವು ಎಸೆದ ಎರಡು ಓವರ್ಗಳಲ್ಲಿ (0 0 0 0 0 0 0 0 W 0 0 1) ಕೇವಲ 1ರನ್ ನೀಡಿದ್ದಾರೆ. ಎರಡನೇ ಓವರ್ನ ಮೂರನೇ ಎಸೆತದಲ್ಲಿ ಗಪ್ಟಿಲ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅವರು ಮುಂದಿನ ಮೂರು ಎಸೆತಗಳಲ್ಲಿ ಕೇವಲ 1 ರನ್ ನೀಡಿದ್ದಾರೆ. ಇಂದಿನ ಪಂದ್ಯದಲ್ಲಿ ಎದುರಾಳಿ ಬ್ಯಾಟ್ಸ್ಮನ್ ಇವರ ಓವರ್ನಲ್ಲಿ ರನ್ಗಳಿಸಲು ಹರಸಾಹಸ ಪಡುತ್ತಿರುವುದು ವಿಶೇಷ.
ಈ ವಿಶ್ವಕಪ್ನಲ್ಲಿ ಬುಮ್ರಾ ಒಟ್ಟು 9 ಮೆಡನ್ ಓವರ್ ಎಸೆದಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಈ ಹಿಂದೆ ಸಹ ಟೀಂ ಇಂಡಿಯಾ ಒತ್ತಡಕ್ಕೊಳಗಾದ ಸಮಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿರುವ ಶ್ರೇಯ ಇವರಿಗೆ ಸಲ್ಲುತ್ತದೆ.