ಆ್ಯಂಟಿಗುವಾ(ವೆಸ್ಟ್ ಇಂಡೀಸ್) : ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮಾಜಿ ನಾಯಕ ಜೇಸನ್ ಹೋಲ್ಡರ್ 13 ಸದಸ್ಯರ ವೆಸ್ಟ್ ಇಂಡೀಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಪ್ರವಾಸದ ವೇಳೆ ಹೊರಗುಳಿದಿದ್ದ ಹೋಲ್ಡರ್ ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಮತ್ತೆ ಡರೇನ್ ಬ್ರಾವೋ ಜೊತೆಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಕ್ರೇಗ್ ಬ್ರಾಥ್ವೇಟ್ರನ್ನು ನಾಯಕನಾಗಿ ನೇಮಕ ಮಾಡಿರುವುದರಿಂದ ಹೋಲ್ಡರ್ ಬೌಲಿಂಗ್ ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಏಕದಿನ ಸರಣಿಯನ್ನು ಹೀನಾಯವಾಗಿ ಸೋತಿದ್ದ ವೆಸ್ಟ್ ಇಂಡೀಸ್, ಟೆಸ್ಟ್ ಸರಣಿಯನ್ನ 2-0ಯಲ್ಲಿ ಮಣಿಸಿ ಅಚ್ಚರಿ ಮೂಡಿಸಿತ್ತು. ಇದೀಗ ಶ್ರೀಲಂಕಾ ವಿರುದ್ಧವೂ ಟಿ-20 ಮತ್ತು ಏಕದಿನ ಸರಣಿ ಗೆದ್ದಿದ್ದು, ಟೆಸ್ಟ್ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಇದನ್ನು ಓದಿ:ವೆಸ್ಟ್ ಇಂಡೀಸ್ vs ಶ್ರೀಲಂಕಾ 2nd ODI : ಲೂಯಿಸ್, ಶೈ ಹೋಪ್ ಆರ್ಭಟಕ್ಕೆ ಲಯ ಕಳೆದುಕೊಂಡ ಲಂಕಾ
ಮಾರ್ಚ್ 21ರಿಂದ ಮೊದಲ ಟೆಸ್ಟ್ ಪಂದ್ಯ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್, ಡೆರೇನ್ ಬ್ರಾವೋ, ಜಾನ್ ಕ್ಯಾಂಪ್‌ಬೆಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ (ವಿಕೀ), ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೈಲ್ ಮೇಯರ್ಸ್, ಕೆಮರ್ ರೋಚ್, ಜೋಮೆಲ್ ವಾರ್ರಿಕನ್.