ನವದೆಹಲಿ : ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ ಈ ಸಾರಿಯ ಐಪಿಎಲ್ನಲ್ಲಿ ಕೆಲ ಬದಲಾವಣೆಯೊಂದಿಗೆ ಅಂಗಳಕ್ಕೆ ಇಳಿಯಬಹುದು ಎಂದು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವಯಸ್ಸಿನ ಕಾರಣದಿಂದ ಅನುಭವಿ ಆಟಗಾರರಾದ ಶೇನ್ ವ್ಯಾಟ್ಸನ್ (ನಿವೃತ್ತಿ) ಮತ್ತು ಡ್ವೇನ್ ಬ್ರಾವೋ ಅವರ ಬದಲಿಗೆ ಇಬ್ಬರು ಆಕ್ರಮಣಕಾರಿ ವಿದೇಶಿ ಆಟಗಾರರನ್ನು ಹುಡುಕಬೇಕಿದೆ ಎಂದಿದ್ದಾರೆ. ಹರಾಜಿಗೂ ಮುನ್ನ ತಂಡದ ಆಯ್ಕೆಯ ಬಗ್ಗೆ ಗೌತಮ್ ಗಂಭೀರ್ ಇಂತಹದ್ದೊಂದು ಸಲಹೆ ನೀಡಿದ್ದಾರೆ.
ಶೇನ್ ವ್ಯಾಟ್ಸನ್ ಈಗಾಗಲೇ ಎಲ್ಲ ಮಾದರಿಯ ಆಟದಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಡ್ವೇನ್ ಬ್ರಾವೋ ವಯಸ್ಸಿನ ಕಾರಣದಿಂದ ಮೊದಲಿನಂತೆ ಅಷ್ಟು ಆಕ್ರಮಣಕಾರಿ ಆಟ ತೋರ್ಪಡಿಸಲು ಸಾಧ್ಯವಾಗದೇ ಇರಬಹುದು.
ಹಾಗಾಗಿ, ಅವರ ಸ್ಥಾನವನ್ನು ತುಂಬಲು ಒಬ್ಬ ಆಲ್‌ರೌಂಡರ್ ಸಹಿತ ಇಬ್ಬರು ವಿದೇಶಿ ಆಟಗಾರರನ್ನು ಕ್ರೀಸ್ಗೆ ಇಳಿಸಬಹುದು. ಹಿಗೇನಾದರೂ ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತಷ್ಟು ಬಲಪ್ರದರ್ಶನ ತೋರ್ಪಡಿಸಬಹುದು ಎಂದಿದ್ದಾರೆ.
ಇನ್ನು, ಕೊನೆಯ ಬಾರಿ ಕಾರಣಾಂತರಗಳಿಂದ ಆಲ್‌ರೌಂಡರ್ ಸುರೇಶ್ ರೈನಾ ತಂಡದಿಂದ ಹೊರ ಗುಳಿದಿದ್ದರು. ಈ ಬಾರಿ ಮತ್ತೆ ಆಗಮಿಸಿದ್ದು ಈ ಪುನರಾಗಮನ ತಂಡಕ್ಕೆ ಉತ್ಸಾಹ ತಂದಿದೆ. ಕಳೆದ ಬಾರಿ ಹೀನಾಯ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್ ಕಿಂಗ್ ಪ್ಲೇ-ಆಫ್ ಅರ್ಹತೆಯಿಂದ ವಂಚಿತರಾಗಬೇಕಾಯಿತು. ಹಾಗಾಗಿ, ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಯಾವ ರೀತಿ ಕಮಾಲ್ ಮಾಡಬಹುದು ಎಂಬುದನ್ನು ಕಾದು ನೋಡಬೇಕಿದೆ.