ಅಹ್ಮದಾಬಾದ್ : ಭಾರತ ತಂಡದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಆಡುವ ಮೂಲಕ ಕಪಿಲ್ ದೇವ್ ನಂತರ 100 ಟೆಸ್ಟ್ ಪಂದ್ಯವನ್ನಾಡಿದ 2ನೇ ವೇಗದ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.
ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕನಾಗಿದ್ದ ವೇಳೆ ತನ್ನ 18ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇಶಾಂತ್ ಶರ್ಮಾ, ನಂತರ ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಡಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮನ್ನು ಯಾವ ನಾಯಕ ಹೆಚ್ಚು ಅರ್ಥ ಮಾಡಿಸಿಕೊಂಡಿದ್ದಾರೆ ಎಂದು ಕೇಳಿದ್ದಕ್ಕೆ 'ಕಷ್ಟ' ಎಂದು ಉತ್ತರಿಸಿದ್ದಾರೆ.
"ಎಲ್ಲರೂ ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನನ್ನನ್ನು ಯಾರು ಹೆಚ್ಚು ಅರ್ಥಮಾಡಿಕೊಂಡಿದ್ದಾರೆಂದು ಹೇಳುವುದು ಖಂಡಿತಾ ಕಷ್ಟ. ಆದರೆ, ಕ್ಯಾಪ್ಟನ್ ನನ್ನನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನಾನು ನಾಯಕನನ್ನು ಹೇಗೆ ಅರ್ಥಮಾಡಿಕೊಂಡಿದ್ದೇನೆ ಎಂಬುದೇ ಯಾವಾಗಲೂ ಮುಖ್ಯವಾಗಿರುತ್ತದೆ" ಎಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಇಶಾಂತ್ ಹೇಳಿದ್ದಾರೆ.
"ನಾನು ನಾಯಕನನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ, ಕ್ಯಾಪ್ಟನ್ ನನ್ನಿಂದ ನಿರ್ದಿಷ್ಟವಾಗಿ ಏನು ಬಯಸುತ್ತಾನೆ ಎಂಬ ವಿಷಯಗಳು ಸ್ಪಷ್ಟವಾಗಿದ್ದರೆ, ಸಂವಹನ ಸುಲಭವಾಗುತ್ತದೆ" ಎಂದು 99 ಟೆಸ್ಟ್ ಪಂದ್ಯಗಳಿಂದ 302 ವಿಕೆಟ್ ಪಡೆದಿರುವ ಡೆಲ್ಲಿ ವೇಗಿ ಹೇಳಿದ್ದಾರೆ.
ಕಪಿಲ್ ದೇವ್ 131 ಟೆಸ್ಟ್ಗಳನ್ನಾಡಿರುವ ಭಾರತದ ಏಕೈಕ ಟೆಸ್ಟ್ ಬೌಲರ್ ಆಗಿದ್ದಾರೆ. ಇದೀಗ ಇಶಾಂತ್ ಶರ್ಮಾ 100ನೇ ಟೆಸ್ಟ್ ಪಂದ್ಯವನ್ನಾಡಿದ 2ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇಶಾಂತ್ 32 ವರ್ಷ ವಯಸ್ಸಾಗಿದ್ದು, ಕಪಿಲ್ ದಾಖಲೆ ಮುರಿಯುವ ಸಾಧ್ಯತೆ ಕೂಡ ಇದೆ.
ಇದನ್ನು ಓದಿ:ಧೋನಿ ಟೆಸ್ಟ್ ನಾಯಕತ್ವದ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ವಿರಾಟ್