ಅಹ್ಮದಾಬಾದ್: ಮುಂಬರುವ ವಿಶ್ವಕಪ್ ತಯಾರಿಗೆ ಐಪಿಎಲ್ ನೆರವಾಗಲಿದೆ ಎಂದಿರುವ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ತಮಗೆ ಸೀಮಿತ ಅವಕಾಶಗಳು ದೊರೆಯುತ್ತವೆ ಎಂದು ಅವರು ಒಪ್ಪಿಕೊಂಡಿದ್ದಾರೆ.
29 ವರ್ಷದ ಇಂಗ್ಲೀಷ್ ಬ್ಯಾಟ್ಸ್ಮನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ಕೋಟಿ ರೂ. ನೀಡಿ 2021ರ ಮಿನಿ ಹರಾಜಿನಲ್ಲಿ ಖರೀದಿಸಿದೆ. 2018-19ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇವರು ಆಡಿದ್ದರು.
ನೀವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನೋಡಿ, ಅದರಲ್ಲೂ ವಿದೇಶಿ ಆಟಗಾರರ ಆಯ್ಕೆಗೆ ಸ್ಪರ್ಧೆ ಹೆಚ್ಚಿದೆ. ನೀವು ಯಾವುದೇ ಸಂಯೋಜನೆಯೊಂದಿಗೆ ಹೋದರೂ, ಅದು ಯಶಸ್ವಿಯಾಗಲಿದೆ ಎಂದು ಬಿಲ್ಲಿಂಗ್ಸ್ ಭಾರತದೆದುರಿನ ಟಿ20 ಸರಣಿಗೂ ಮುನ್ನ ನಡೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ತಂಡದಲ್ಲಿ ಸ್ಪರ್ಧೆ ಅಸಾಧಾರಣವಾಗಿದೆ. ಡೆಲ್ಲಿ ಕಳೆದ ವರ್ಷ ಫೈನಲ್‌ಗೆ ತಲುಪಿರುವುದರಿಂದ, ತಮಗೆ ಸೀಮಿತ ಅವಕಾಶ ದೊರೆಯಬಹುದು. ಆದರೆ ಇದು ವಿಶ್ವಕಪ್‌ಗೆ ತಯಾರಿ ಮಾಡಿಕೊಳ್ಳಲು ಮತ್ತು ಇಲ್ಲಿನ ಪರಿಸ್ಥಿತಿಗಳಲ್ಲಿ ಹೊಂದಿಕೊಳ್ಳಲು ನನಗೆ ಉತ್ತಮ ಅವಕಾಶ ನೀಡುತ್ತದೆ" ಎಂದು ಇಂಗ್ಲೀಷ್ ವಿಕೆಟ್ ಕೀಪರ್ ತಿಳಿಸಿದ್ದಾರೆ.
ಹಿಂದಿನ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ದೆಹಲಿ, ವಿದೇಶಿ ಆಟಗಾರರ ವಿಭಾಗದ ಆಯ್ಕೆಗಾಗಿ ತೊಂದರೆಯನುಭವಿಸಿತ್ತು. ಕಳೆದ ವರ್ಷ ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡಾ, ಆ್ಯನ್ರಿಚ್ ನೋಕಿಯಾ, ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮಾಯೆರ್ರೊಂದಿಗೆ ಕಣಕ್ಕಿಳಿದಿತ್ತು.
ಹೆಟ್ಮಾಯಿರ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು, ಆದರೆ ನೋಕಿಯಾ ಮತ್ತು ರಬಾಡ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ತಮ್ಮ ತಂಡ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದ್ದರು. ರಬಾಡ 32 ಮತ್ತು ನೋಕಿಯಾ 27 ವಿಕೆಟ್ ಪಡೆದಿದ್ದರು.
ಈ ವರ್ಷ ಫ್ರಾಂಚೈಸಿ, ಬಿಲ್ಲಿಂಗ್ಸ್, ಸ್ಟಿವ್ ಸ್ಮಿತ್ ಮತ್ತು ಆಲ್ರೌಂಡರ್ ಟಾಮ್ ಕರ್ರನ್ರನ್ನು ಖರೀದಿಸಿದೆ. ದೊಡ್ಡ ಆಟಗಾರರನ್ನು ಖರೀದಿಸಿರುವ ಡೆಲ್ಲಿಗೆ ಈ ವರ್ಷವೂ ವಿದೇಶಿ ಕ್ರಿಕೆಟಿಗರ ಆಯ್ಕೆ ಮಾಡುವುದೇ ದೊಡ್ಡ ತಲೆ ನೋವಾಗಲಿದೆ.
ಇದನ್ನು ಓದಿ:ಟಿ20 ವಿಶ್ವಕಪ್ನಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ: ಲಕ್ಷ್ಮಣ್