ದುಬೈ: ಸತತ ಗೆಲುವುಗಳಿಂದ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂತರ ಸತತ 2 ಸೋಲು ಕಂಡು 2ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ತಂಡಕ್ಕೆ 2 ಸೋಲಗಳು ದೊಡ್ಡ ಸಮಸ್ಯೆ ಏನಲ್ಲ, ನಾವು ಮತ್ತೆ ನಮ್ಮ ಸಾಮರ್ಥ್ಯ ನಂಬಿ ಆಡಬೇಕಿದೆ ಎಂದು ಡೆಲ್ಲಿ ಬೌಲರ್ ರಬಾಡ ಹೇಳಿದ್ದಾರೆ.
ಟೂರ್ನಿಯಲ್ಲಿ 11 ಪಂದ್ಯಗಳಿಂದ 4 ಸೋಲು 7 ಗೆಲುವುಗಳೊಂದಿಗೆ 14 ಅಂಕ ಪಡೆದು 2ನೇ ಸ್ಥಾನದಲ್ಲಿರುವ ಡೆಲ್ಲಿ ಮಂಗಳವಾರ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಕ್ಯಾಪಿಟಲ್ಸ್ ಕಳೆದ ಎರಡು ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲತ್ತಾ ನೈಟರ್ ರೈಡರ್ಸ್ ವಿರುದ್ಧ ಸತತ ಎರಡು ಪಂದ್ಯ ಸೋಲು ಕಂಡಿದೆ.
ಆದರೆ,ರಬಾಡ ಮಾತ್ರ ಈ ಸೋಲುಗಳನ್ನ ದೊಡ್ಡ ಬಿಕ್ಕಟ್ಟಲ್ಲ, ನಾವೀಗ ಟೂರ್ನಿಯ ಅಂತಿಮ ಘಟ್ಟದಲ್ಲಿದ್ದೇವೆ, ಈ ಸಂದರ್ಭದಲ್ಲಿ ನಾವು ತಿರುಗಿ ಬೀಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. "ನೀವು ಇಲ್ಲಿ ಅತ್ಯಂತ ಗುಣಮಟ್ಟವುಳ್ಳ ಕ್ರಿಕೆಟ್ ಆಡುತ್ತಿದ್ದೀರಾ, ಇಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ. ನಾವು ಟೂರ್ನಿಯನ್ನು ಉತ್ತಮವಾಗಿ ಪ್ರಾರಂಭಿಸಿದ್ದರಿಂದ ತಂಡದಲ್ಲಿ ಸಕರಾತ್ಮಕತೆಯನ್ನು ತಂದುಕೊಟ್ಟಿತ್ತು.
ಆದರೆ, ಈ ಸಂದರ್ಭದಲ್ಲಿ ನಾವು ಕೆಲವು ಪಂದ್ಯಗಳಲ್ಲಿ ಎಡವಿದ್ದೇವೆ. ನಾವು ಕೆಲವು ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ಮತ್ತೆ ತಿರುಗಿ ಬೀಳಬೇಕಿದೆ" ಎಂದು ರಬಾಡ ಅಭಿಪ್ರಾಯಪಟ್ಟಿದ್ದಾರೆ.
" ನಾವು ಈಗ ಟೂರ್ನಿಯ ನಿರ್ಣಾಯಕ ಹಂತಕ್ಕೆ ತಲುಪಿದ್ದೇವೆ, ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯವುಳ್ಳ ತಂಡಗಳ ಸವಾಲನ್ನು ಎದುರಿಸಬೇಕಿದೆ. ಆ ಪಂದ್ಯದಲ್ಲಿ ಯಾರಾದರೂ ಗೆಲ್ಲಬಹುದು. ಹಾಗಾಗಿ, ಟೂರ್ನಮೆಂಟ್ನ ಮುಂದಿನ ಕೆಲವು ಪಂದ್ಯಗಳನ್ನು ಗೆಲ್ಲಬೇಕಾದರೆ ನಾವು ನಮ್ಮ ಉತ್ತಮ ಪ್ರದರ್ಶನವನ್ನು ತೋರಿಸಬೇಕಿದೆ.
ಈ ಸಂದರ್ಭದಲ್ಲಿ ನಮ್ಮ ಸಾಮರ್ಥ್ಯದ ಮೇಲೆ ನಾವು ನಂಬಿಕೆಯಿಡಬೇಕಿದೆ. ಸಣ್ಣ ಬದಲಾವಣೆ ಮಾಡಿಕೊಂಡರೆ ನಾವು ಗೆಲುವು ಪಡೆಯಬಹುದು ಎಂಬ ವಿಶ್ವಾಸ ನನಗಿದೆ ಎಂದು ರಬಡಾ ತಿಳಿಸಿದ್ದಾರೆ. ರಬಾಡ 11 ಪಂದ್ಯಗಳಿಂದ 23 ವಿಕೆಟ್ ಪಡೆಯುವ ಮೂಲಕ 2020ರ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.