ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಪ್ರದರ್ಶನದ ಮೇಲೆ ಟೀಕಿಸುತ್ತಿರುವವರನ್ನು ನೋಡಿದರೆ ನನಗೆ ಕರುಣೆ ಉಂಟಾಗುತ್ತಿದೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2020ರ ಐಪಿಎಲ್ನಲ್ಲಿ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಅವರ ನೇತೃತ್ವದ ತಂಡ 7 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಕೇವಲ 2 ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಆದರೆ, ಸಯ್ಯದ್ ಕಿರ್ಮಾನಿ 39 ವರ್ಷದ ಆಟಗಾರನನ್ನು ಟೀಕಿಸುವವರಿಗೆ ಚಾಟಿ ಬೀಸಿದ್ದಾರೆ.
ಪ್ರತಿಯೊಬ್ಬ ಕ್ರಿಕೆಟಿಗರ ಜೀವನದಲ್ಲಿ ಯಶಸ್ಸಿನ ಶಿಖರ ಏರುವ ಸಮಯ ಹೇಗಿರುತ್ತದೋ ಹಾಗೇ ಕೆಟ್ಟ ಸಮಯ ಎಂಬುದು ಇರುತ್ತದೆ. ಅದೇ ರೀತಿ ಎಂ.ಎಸ್.ಧೋನಿ ವಿಚಾರದಲ್ಲೂ ನಡೆಯುತ್ತಿದೆ. ಧೋನಿ ಪ್ರದರ್ಶನದ ಬಗ್ಗೆ ಟೀಕಿಸುತ್ತಿರುವವರ ಬಗ್ಗೆ ನಿಜವಾಗಿಯೂ ನಾನು ಕರುಣೆ ತೋರಿಸುತ್ತೇನೆ ಎಂದು ಕಿರ್ಮಾನಿ ತಿಳಿಸಿದ್ದಾರೆ
" ಧೋನಿ ಒಂದು ಕಾಲದಲ್ಲಿ ಅತ್ಯುತ್ತಮ ಫಿನಿಶರ್ ಎನಿಸಿಕೊಂಡಿದ್ದರು. ಅವರ ಸಾಧನೆಯನ್ನು ಯಾವತ್ತಿಗೂ ನಾವು ಮರೆಯಬಾರದು. ಯಾವುದೇ ಸಮಯದಲ್ಲೂ ಧೋನಿ ತಂಡಕ್ಕೆ ಗೆಲುವು ತಂದುಕೊಡಬಲ್ಲಂತಹ ಬ್ಯಾಟ್ಸ್ಮನ್ ಧೋನಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಸುದೀರ್ಘ ಸಮಯದ ನಂತರ ಧೋನಿ ಕ್ರಿಕೆಟ್ಗೆ ಮರಳಿದ್ದಾರೆ. ಆದ್ದರಿಂದ ಧೋನಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ" ಎಂದು ಹೇಳಿದ್ದಾರೆ.
ಕ್ರಿಕೆಟಿಗರಿಗೆ ನಿರ್ದಿಷ್ಟ ವಯಸ್ಸಿನ ನಂತರ ಹೆಚ್ಚು ಚುರುಕುತನ ಇರುವುದಿಲ್ಲ ಎಂಬುದನ್ನು 70 ವರ್ಷ ವಯಸ್ಸಿನ ಮಾಜಿ ಆಟಗಾರ ಒಪ್ಪಿಕೊಂಡಿದ್ದಾರೆ. ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
" ಯುವಕರಿಗೆ ಹೋಲಿಸಿದರೆ ಇಂತಹ ವಯಸ್ಸಿನ ಜನರಿಗೆ ಹೆಚ್ಚು ಚುರುಕುತನವಿರಲಿಲ್ಲ. ಇದಲ್ಲದೇ ಆ ಆಟಗಾರ ತನ್ನ ಭವಿಷ್ಯದ ವಿಚಾರಗಳ ಬಗ್ಗೆ ಸಾಕಷ್ಟು ಉದ್ವೇಗವನ್ನು ಹೊಂದಿರುತ್ತಾನೆ. ಇದು ನೈಸರ್ಗಿಕ ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು " ಎಂದು ಅವರು ಹೇಳಿದ್ದಾರೆ.