ನವದೆಹಲಿ: ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಜೊತೆಗೆ, ಚೀನಾದ ಮೊಬೈಲ್ ಕಂಪನಿ ವಿವೋ ಸೇರಿದಂತೆ ತನ್ನ ಎಲ್ಲ ಪ್ರಾಯೋಜಕರನ್ನು ಉಳಿಸಿಕೊಳ್ಳಲು ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಡಳಿತ ಮಂಡಳಿ ನಿರ್ಧರಿಸಿದೆ.
ದೇಶದ ಹೊರಗೆ ಟೂರ್ನಿಯನ್ನು ಆಯೋಜಿಸಲು ಕೇಂದ್ರ ಸರ್ಕಾರದಿಂದ ಬಿಸಿಸಿಐ ಒಪ್ಪಿಗೆ ಪಡೆದಿದೆ. ಈ ಕುರಿತು ಇಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜೂನ್‌ನಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ನಂತರ, ಚೀನಾದ ಪ್ರಾಯೋಜಕತ್ವ ಗೊಂದಲವಾಗಿತ್ತು. ಹಿಂಸಾತ್ಮಕ ಮುಖಾಮುಖಿಯ ನಂತರ ಒಪ್ಪಂದಗಳನ್ನು ಪರಿಶೀಲಿಸುವುದಾಗಿ ಬಿಸಿಸಿಐ ಭರವಸೆ ನೀಡಿತ್ತು.
ಮತ್ತೊಂದು ಪ್ರಮುಖ ನಿರ್ಧಾರವೆಂದರೇ ಐಪಿಎಲ್ ಆಡಳಿತ ಮಂಡಳಿ ಮಹಿಳಾ ಐಪಿಎಲ್ ಅನ್ನು ಸಹ ಅನುಮೋದಿಸಿದೆ.
ಇನ್ನು, ಕ್ರೀಡಾಕೂಟದ ಫೈನಲ್ ಪಂದ್ಯ ನವೆಂಬರ್ 10 ರಂದು ನಡೆಯಲಿದೆ.