ಅಬುಧಾಬಿ: ಐಪಿಎಲ್ ಇತಿಹಾಸದಲ್ಲೇ ಆಡಿದ ಎಲ್ಲ ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿದ್ದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಟೂರ್ನಿಯಲ್ಲಿ ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.
ಸಿಎಸ್ಕೆ 2016 ಮತ್ತು 2017ರಲ್ಲಿ ನಿಷೇಧಕ್ಕೊಳಗಾಗಿತ್ತು. ಆ ಎರುಡು ಆವೃತ್ತಿಗಳನ್ನು ಹೊರತುಪಡಿಸಿದರೆ, ಉಳಿದ 2008ರಿಂದ 2019ರವರೆಗೆ ಆಡಿದ ಎಲ್ಲ ಆವೃತ್ತಿಗಳಲ್ಲೂ 4ರ ಘಟ್ಟಕ್ಕೆ ಪ್ರವೇಶಿಸಿತ್ತು. ಇದರಲ್ಲಿ 8 ಬಾರಿ ಫೈನಲ್ ಪ್ರವೇಶಿಸಿದ್ದರೆ, 3 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತ್ತು. ಅದರಲ್ಲೂ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.
ಆದರೆ, 2020ರಲ್ಲಿ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಿಂದ 4 ಗೆಲುವು ಹಾಗೂ 8 ಸೋಲು ಕಂಡಿದ್ದು, ಕೇವಲ 8 ಅಂಕ ಪಡಿದಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಕನಿಷ್ಠ 14 ಅಂಕಗಳ ಅಗತ್ಯವಿದೆ. ಆದರೆ ಧೋನಿ ಬಳಗ ಉಳಿದ 2 ಪಂದ್ಯಗಳನ್ನು ಗೆದ್ದರೂ ಅದರ ಅಂಕ 12 ಆಗಲಿದೆ. ರನ್ರೇಟ್ ಕೂಡ ಎಲ್ಲ ತಂಡಗಳಿಗಿಂತ ಕಡಿಮೆ ಇರುವುದರಿಂದ ಸಿಎಸ್ಕೆ ಅಧಿಕೃತವಾಗಿ ಹೊರಬಿದ್ದಂತಾಗಿದೆ. ಕೇವಲ ಕೊನೆಯ ಸ್ಥಾನಿ ಎಂಬ ಕಳಂಕವನ್ನು ಕಳೆದುಕೊಳ್ಳುವುದಕ್ಕೆ ಮಾತ್ರ ಸೆಣಸಾಡಬೇಕಿದೆ.
ಈಗಾಗಲೆ ಆರ್ಸಿಬಿ, ಮುಂಬೈ ಹಾಗೂ ಡೆಲ್ಲಿ ತಂಡಗಳು ತಲಾ 14 ಅಂಕ ಹೊಂದಿದ್ದು ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿವೆ. ಈ ಮೂರು ತಂಡಗಳು ಇನ್ನು ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಖಚಿತಗೊಳ್ಳಲಿದೆ. ಇನ್ನು 4ನೇ ಸ್ಥಾನಕ್ಕಾಗಿ ಪಂಜಾಬ್, ರಾಜಸ್ಥಾನ್, ಕೋಲ್ಕತ್ತಾ ತಂಡಗಳು ಕಾದಾಡುತ್ತಿವೆ. ಈ 3 ತಂಡಗಳಲ್ಲೂ ಕೋಲ್ಕತ್ತಾ ತಂಡಕ್ಕೆ ಹೆಚ್ಚು ಅವಕಾಶವಿದೆ.