ದುಬೈ: ಸ್ನಾಯು ಸೆಳೆತಕ್ಕೊಳಗಾಗಿ 13ನೇ ಆವೃತ್ತಿಯಿಂದ ಹೊರಬಿದ್ದಿರುವ ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಯುವ ಎಡಗೈ ವೇಗಿ ಪೃಥ್ವಿರಾಜ್ ಯರ್ರಾ ಅವರನ್ನು ಆಯ್ಕೆ ಮಾಡಿರುವುದಾಗಿ ಸನ್‌ರೈಸರ್ಸ್ ಹೈದರಾಬಾದ್ ತಿಳಿಸಿದೆ.
ಅಕ್ಟೋಬರ್ 2 ರಂದು ದುಬೈನಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 19 ನೇ ಓವರ್ನಲ್ಲಿ ಬೌಲಿಂಗ್ ಮಾಡುವಾಗ ಭುವಿ ಸೊಂಟದ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಆ ಓವರ್ನಲ್ಲಿ ಒಂದು ಎಸೆತವನ್ನೂ ಎಸೆಯಲಾಗದೆ ಮೈದಾನದಿಂದ ಹೊರ ಬಂದಿದ್ದರು. ಸೋಮವಾರ ಅವರು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆಂದು ಹೈದರಾಬಾದ್ ಫ್ರಾಂಚೈಸಿ ಪ್ರಕಟಣೆ ಹೊರಡಿಸಿತ್ತು.
ಭಾರತ ತಂಡದ ವೇಗಿ ಐಪಿಎಲ್ನ ಮುಂದಿನ ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ. ಅವರ ಸ್ಥಾನದಲ್ಲಿ 22 ವರ್ಷದ ಪೃಥ್ವಿರಾಜ್ ಆಡಲಿದ್ದಾರೆ ಎಂದು ಸನ್‌ರೈಸರ್ಸ್ ತಂಡ ಮಂಗಳವಾರ ಖಚಿತಪಡಿಸಿದೆ.
"ಭುವನೇಶ್ವರ್ ಕುಮಾರ್ ಗಾಯದಿಂದಾಗಿ 2020ರ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅವರ ಬದಲಿ ಆಟಗಾರನಾಗಿ ಪೃಥ್ವಿರಾಜ್ ಯರ್ರಾ ತಂಡ ಸೇರಿಕೊಳ್ಳಲಿದ್ದಾರೆ" ಎಂದು ಟ್ವಿಟ್ಟರ್ನಲ್ಲಿ ತಿಳಿಸಿದೆ.
11 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಆಂಧ್ರಪ್ರದೇಶದ ಬೌಲರ್ ಪೃಥ್ವಿರಾಜ್ ಶೀಘ್ರದಲ್ಲೇ ಯುಎಇಯಲ್ಲಿರುವ ಸನ್‌ರೈಸರ್ಸ್ ತಂಡ ಸೇರುವ ನಿರೀಕ್ಷೆಯಿದೆ. ಪೃಥ್ವಿರಾಜ್ ಕಳೆದ ವರ್ಷ ಕೋಲ್ಕತ್ತಾ ನೈಟ್‌ರೈಡರ್ಸ್ ಪರ ಆಡಿದ್ದರು.
ಬಿಸಿಸಿಐ ಮೂಲವೊಂದರ ಪ್ರಕಾರ, ಗಾಯಾಳು ಭುವನೇಶ್ವರ ಕುಮಾರ್ಗೆ ಕನಿಷ್ಠ 6 ರಿಂದ 8 ವಾರಗಳವರೆಗೆ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಭುವಿ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಗಳಿಂದರೂ ಹೊರಗುಳಿಯಬೇಕಾಗಿದೆ.